ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಪರಾಷ್ಟ್ರಪತಿಯಾಗಿ ಹಮೀದ್ ಅನ್ಸಾರಿ ಆಯ್ಕೆ
ಉಪರಾಷ್ಟ್ರಪತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಯುಪಿಎ ಬೆಂಬಲಿತ ಅಭ್ಯರ್ಥಿ ಹಮೀದ್ ಅನ್ಸಾರಿ ಅವರು ಎನ್‌ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರನ್ನು ಸೋಲಿಸಿ 13ನೆಯ ಉಪರಾಷ್ಟ್ರಪತಿಯಾಗಿ ಗೆಲುವು ಸಾಧಿಸಿದ್ದಾರೆ.

ಉಪರಾಷ್ಟ್ರಪತಿ ಸ್ಥಾನಕ್ಕಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅನ್ಸಾರಿ ಅವರು 455 ಮತಗಳನ್ನು ಪಡೆದರೆ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ 222 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗಿದ್ದಾರೆ.

ತೃತೀಯ ರಂಗ ಬೆಂಬಲಿತ ಅಭ್ಯರ್ಥಿ ರಷೀದ್ ಮಸೂದ್ 75 ಮತಗಳನ್ನು ಪಡೆದಿದ್ದು, 10 ಮತಗಳು ತಿರಸ್ಕೃತವಾಗಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿರುವ ಒಟ್ಟಾರೆ 788 ಸದಸ್ಯರಲ್ಲಿ ಯುಪಿಎ ಮತ್ತು ಬಿಎಸ್‌ಪಿ 425 ಸದಸ್ಯರ ಬೆಂಬಲವನ್ನು ಪಡೆದರೆ, ಎನ್‌ಡಿಎ 240 ಸದಸ್ಯರ ಬೆಂಬಲ ಹಾಗೂ ತೃತೀಯ ರಂಗ 81 ಸದಸ್ಯರ ಬೆಂಬಲ ಹೊಂದಿತ್ತು ಎಂದು ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ದೇವೇಗೌಡ ಅವರ ಜೆಡಿಎಸ್‌ನ ನಾಲ್ವರು ಸಂಸತ್ ಸದಸ್ಯರು ಮತದಾನದಲ್ಲಿ ಭಾಗವಹಿಸದೆ ಗೈರುಹಾಜರಾದರೆ ತೃಣಮೂಲ ಕಾಂಗ್ರೆಸ್ ಸಂಸತ್ ಸದಸ್ಯರು ಮತದಾನದ ಕೊನೆಯ ಗಳಿಗೆಯಲ್ಲಿ ತಮ್ಮ ಮತಗಳನ್ನು ಚಲಾಯಿಸಿದರು.

ತಿಹಾರ್ ಜೈಲಿನಲ್ಲಿ ಕೊಲೆಪ್ರಕರಣವನ್ನು ಎದುರಿಸುತ್ತಿರುವ ಸಂಸತ್ ಸದಸ್ಯ ಪಪ್ಪು ಯಾದವ್ ತಮ್ಮ ಪತ್ನಿ ಲೋಕ ಜನಶಕ್ತಿ ಪಕ್ಷದ ಸಂಸತ್ ಸದಸ್ಯೆ ರಂಜೀತಾ ಅವರೊಂದಿಗೆ ಗಾಲಿ ಕುರ್ಚಿಯಲ್ಲಿ ಸದನಕ್ಕೆ ಆಗಮಿಸಿ ಮತ ಚಲಾಯಿಸಿದರು.

ಕೊಲೆ ಪ್ರಕರಣದಲ್ಲಿ ಬಿಹಾರ್ ಜೈಲಿನಲ್ಲಿರುವ ಆರ್‌ಜೆಡಿ ಸಂಸತ್ ಸದಸ್ಯ ಮೊಹಮ್ಮದ್ ಶಹಾಬುದ್ದಿನ್ ತಮ್ಮ ಮತವನ್ನು ಚಲಾಯಿಸಿ ಕೆಲಕಾಲದ ಅವಧಿಯನ್ನು ಸಭಾಂಗಣದಲ್ಲಿ ಕಳೆದರು.

ಡಿಎಂಕೆ ಸಂಸತ್ ಸದಸ್ಯೆ ಕನಿಮೊಳಿ , ಸಂಸತ್ ಸದಸ್ಯೆ ಪ್ರಿಯಾ ದತ್, ಸೇರಿದಂತೆ ಇನ್ನಿತರ ಸದಸ್ಯರು ಮತದಾನದಲ್ಲಿ ಭಾಗವಹಿಸಿದರು.
ಮತ್ತಷ್ಟು
ತಾಜ್ ಜತೆ ರೈಲ್ವೇ ಇಲಾಖೆ ಒಪ್ಪಂದ
ಭಾರತ - ಅಮೆರಿಕ ಪರಮಾಣು ಒಪ್ಪಂದ: ಪಾಕ್ ಆಕ್ಷೇಪ
ನೆರೆ ಹಾವಳಿ ರಾಜ್ಯಗಳಿಗೆ ಅಮೆರಿಕ ನೆರವು
ಭಾರತ ನೆರೆ ಹಾವಳಿ ಸಂತ್ರಸ್ತರಿಗೆ ಅಮೆರಿಕಾ ನೆರವು
ಉಪರಾಷ್ಟ್ರಪತಿ ಹುದ್ದೆ : ಅನ್ಸಾರಿ ಗೆಲುವಿನ ದಾರಿಯಲ್ಲಿ
ಇಂದು 'ಕ್ವಿಟ್ ಇಂಡಿಯಾ' ಸ್ಮರಣೆ