ಭಾರತ-ಅಮೆರಿಕ ಪರಮಾಣು ವ್ಯವಹಾರ ಒಪ್ಪಂದದ ವಿಷಯದಲ್ಲಿ ಮತಭೇದ ಹೊಂದಿರುವ ಎಡಪಕ್ಷಗಳು ಸರಕಾರಕ್ಕೆ ನೀಡಿರುವ ಬೆಂಬಲವನ್ನು ಬೇಕಿದ್ದರೆ ಹಿಂದೆಗೆದುಕೊಳ್ಳಬಹುದು ಎಂದು ಪ್ರಧಾನಿ ಸಿಂಗ್ ಹೇಳಿರುವುದಕ್ಕೆ ಪ್ರತಿಕ್ರಿಯೆ ಎಂಬಂತೆ ವಿರೋಧಪಕ್ಷ ಬಿಜೆಪಿ ಇಂದು ಎಡಪಕ್ಷಗಳು ಸರಕಾರಕ್ಕೆ ನೀಡಿರುವ ಬೆಂಬಲ ಧೈರ್ಯವಿದ್ದರೆ ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಪ್ರಧಾನಿಯವರು ಅಚಾನಕ್ ಆಗಿ ತೋರಿರುವ ಧೈರ್ಯ ಆಶ್ಚರ್ಯಕರವಾಗಿದೆ.ಗೋವೆಯಲ್ಲಿ ಇತ್ತೀಚೆಗೆ ಪ್ರಜಾಸತ್ತೆಯನ್ನು ಕೊಲ್ಲಲಾದಾಗ,ರೈತರ ಆತ್ಮಹತ್ಯೆಗಳು ನಡೆದಾಗ ಅವರು ಇಂತಹ ಧೈರ್ಯವನ್ನು ಕಿಂಚಿತ್ತೂ ತೋರಿರಲಿಲ್ಲ ಎಂದು ಲೇವಡಿ ಮಾಡಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್,ಪರಮಾಣು ಒಪ್ಪಂದವನ್ನು ಸಂಸತ್ತಿನಲ್ಲಿ ಮತಕ್ಕೆ ಹಾಕಬೇಕೆಂದು ತಮ್ಮ ಪಕ್ಷ ಅಪೇಕ್ಷಿಸುತ್ತದೆ ಎಂದರು.
ಸ್ವಾತಂತ್ರ್ಯ ಹೋರಾಟ ದಿನಗಳಿಂದಲೂ ಆತ್ಮವಂಚನೆ ಮತ್ತು ದ್ವಿಮುಖ ನೀತಿಯನ್ನೇ ತಮ್ಮ ಹಕ್ಕನ್ನಾಗಿ ಮಾಡಿಕೊಂಡಿರುವ ಎಡಪಕ್ಷಗಳು ಈಗ ಯಾವುದೇ ರೀತಿಯ ಉತ್ತರದಾಯಿತ್ವವಿಲ್ಲದೆ ಅಧಿಕಾರವನ್ನು ಆನಂದಿಸುತ್ತಿವೆ.ಇದೀಗ ಕಚ್ಚಿ ತೋರಿರುವ ಕಾಲ ಅವಕ್ಕೆ ಒದಗಿ ಬಂದಿದೆ ಮತ್ತು ಅವು ಅದನ್ನು ಮಾಡಿ ತೋರಿಸಬೇಕು ಎಂದು ಸವಾಲು ಹಾಕಿದರು.
|