ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿರುವ ನನ್ನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜಕೀಯ ಕಾರಣಗಳು ಅಡ್ಡಿಯಾಗುತ್ತಿವೆ. ಒಂದು ವೇಳೆ ನಾನು ಭೂ ಹಗರಣದಲ್ಲಿ ಅಪರಾಧಿ ಎಂದು ಸಾಬೀತಾದಲ್ಲಿ ಜೈಲಿಗೆ ತಳ್ಳಿ ಎಂದು ಅಮಿತಾಭ ಬಚ್ಚನ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳು ಹಾಗೂ ರಾಜ್ಯ ರಾಜಕಾರಣ ಮತ್ತು ವ್ಯವಸ್ಥೆ ನಾನು ಭೂಮಿಯನ್ನು ಹೊಂದಬಾರದೆಂದು ಬಯಸಿದಲ್ಲಿ ನನ್ನನ್ನು ಜೈಲಿಗೆ ತಳ್ಳುವುದಕ್ಕಿಂತ ಬೇರೆ ಎನು ಮಾಡಲಾರರು, ಆದರೆ ಇದರಿಂದ ವಿರೋಧಿಗಳು ಪಡೆಯುವುದಾದರೂ ಏನು?ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಅಂತಿಮವಾಗಿ ನಾನು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಜೈಲುವಾಸವನ್ನು ಅನುಭವಿಸುವೆ. ನನಗೆ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಲಿ, ಮುಖ್ಯಮಂತ್ರಿಯಾಗುವುದಾಗಲಿ, ಪ್ರಧಾನಿ ಅಥವಾ ರಾಷ್ಟ್ರಪತಿಯಾಗಲಿ ಹುದ್ದೆಗೆ ಏರುವ ಇಚ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದ ಮಾಯಾವತಿ ನೇತ್ರತ್ವದ ಸರಕಾರ ಭೂಮಿ ಸ್ವಾಧೀನ ಕುರಿತಂತೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಬಾರಾಬಂಕಿ ಗ್ರಾಮ ಸಮಿತಿಗೆ ಭೂಮಿಯನ್ನು ದಾನ ಮಾಡುವುದಾಗಿ ಘೋಷಿಸಿದ ಅವರು ನಾನೊಬ್ಬ ಕಲಾವಿದ ಮಾತ್ರ ಎನ್ನುವುದನ್ನು ಅರಿಯಬೇಕು ಎಂದು ಹೇಳಿದ್ದಾರೆ.
ಬಾರಾಬಂಕಿಯ ಜಿಲ್ಲಾಧಿಕಾರಿಗಳು ಈ ಭೂಮಿ ನನ್ನ ಹೆಸರಲ್ಲಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಮಹಾರಾಷ್ಟ್ರದ ಭಾವನಾದಲ್ಲಿ ಭೂಮಿಯನ್ನು ಖರೀದಿಸಲು ಈ ಪ್ರಮಾಣ ಪತ್ರ ಅಗತ್ಯವಾಗಿದ್ದರಿಂದ ಸಂಬಂಧಪಟ್ಟ ಇಲಾಖೆಗೆ ನಾನು ಸಲ್ಲಿಸಿದ ಹಿನ್ನೆಲೆಯಲ್ಲಿ ಅವರು ಮುಂದುವರೆಯಲು ಸೂಚಿಸಿದ್ದರು ಎಂದು ಬಚ್ಚನ್ ತಿಳಿಸಿದ್ದಾರೆ.
ಆದರೆ ಎರಡು ಮೂರು ವರ್ಷಗಳ ನಂತರ ಅಕಸ್ಮಿಕವಾಗಿ ಜಿಲ್ಲಾಧಿಕಾರಿಗಳು ನೀಡಿದ ಪ್ರಮಾಣ ಪತ್ರ ಸರಿಯಾಗಿಲ್ಲವೆಂದು ಸರಕಾರ ಹೇಳಿದರೆ ನಾನೇನು ಮಾಡಲು ಸಾಧ್ಯವಿಲ್ಲ. ಪ್ರತಿ ಬಾರಿ ಸರಕಾರಗಳು ಬದಲಾದರೂ ಪ್ರಜೆಗಳ ಕೆಲಸಗಳಿಗೆ ಅಡ್ಡಿಯಾಗುವುದು ಸೂಕ್ತವಲ್ಲ. ನಾನು ರಾಜಕೀಯಕ್ಕೆ ಸೂಕ್ತ ವ್ಯಕ್ತಿಯಲ್ಲವಾದ್ದರಿಂದ ನಾನು ರಾಜಕೀಯಕ್ಕೆ ಮರಳಲಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
|