ಗೋವಾ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಚದುರಂಗದಾಟದಲ್ಲಿ ಮತ್ತೆ ಪ್ರಮುಖ ಬೆಳವಣೆಗೆ ತಂದಿದೆ.ಯುಜಿಡಿಪಿಯ ಶಾಸಕ ಅಟಾನ್ಸಿಯೋ ಮಾನ್ಸರೆಟ್ ಅವರು ಬಿಜೆಪಿ ನೇತೃತ್ವದ ಜಿಡಿಎಗೆ ನೀಡಿದ್ದ ಬೆಂಬಲವನ್ನು ಹಿಂದೆಗೆದುಕೊಂಡು ಕಾಂಗ್ರೆಸ್ ನೇತೃತ್ವದ ದಿಗಂಬರ ಕಾಮತ್ ಸರಕಾರಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ರಾಜ್ಯಪಾಲರಿಗೆ ಪತ್ರವೊಂದನ್ನು ಬರೆದಿರುವ ಮಾನ್ಸರೆಟ್,ಗೋವಾದ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸಲು ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಈ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ದಿಗಂಬರ್ ಕಾಮತ್ ನಾನು ಈ ಹಿಂದೆಯೂ ಸುಭದ್ರ ಸ್ಥಿತಿಯಲ್ಲಿದ್ದೆ.ಈಗ ಇನ್ನಷ್ಟು ಸುಭದ್ರ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿದರು.
ಮಾನ್ಸರೆಟ್ ನಿರ್ಧಾರದಿಂದಾಗಿ ಇದೀಗ ಕಾಂಗ್ರೆಸ್ ನೇತೃತ್ವದ ದಿಗಂಬರ ಕಾಮತ್ ಸರಕಾರಕ್ಕೆ ಇಪ್ಪತ್ತು ಮಂದಿ ಶಾಸಕರ ಬೆಂಬಲ ದೊರೆತಂತಾಗಿದೆ.ಒಟ್ಟು 40ಮಂದಿ ಶಾಸಕರ ಪೈಕಿ ಜಿಡಿಎ ಬಲ 19ಕ್ಕೆ ಕುಸಿದಂತಾಗಿದೆ.
ಕಾಂಗ್ರೆಸ್ ಬಂಡುಕೋರ ಶಾಸಕಿ ವಿಕ್ಟೋರಿಯಾ ಫೆರ್ನಾಂಡಿಸ್ ಅವರ ರಾಜಿನಾಮೆಯನ್ನು ಸಭಾಪತಿ ಇದುವರೆಗೂ ಸ್ವೀಕರಿಸದಿರುವುದರಿಂದ ಅವರ ಭವಿಷ್ಟ ತೂಗುಯ್ಯಾಲೆಯಲ್ಲಿದೆ.
ಫೆರ್ನಾಂಡಿಸ್ ಮೊನ್ನೆ ಬಿಜೆಪಿ ನೇತೃತ್ವದ ಸರಕಾರ ರಚನೆಗೆ ತನ್ನ ಬೆಂಬಲ ವ್ಯಕ್ತಪಡಿಸಿದ್ದರು.ಗೋವಾ ರಾಜಕೀಯ ಬೆಳವಣಿಗೆ ವಿಚಾರದಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕೆಂದು ಜಿಡಿಎ ಆಗ್ರಹಿಸಿದೆ.
ಜುಲೈ 25ರಂದು 50ದಿನಗಳ ಕಾಲಾವಧಿಯ ದಿಗಂಬರ್ ಕಾಮತ್ ನೇತೃತ್ವದ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಯುಜಿಪಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ ಹಿಂದೆಗೆದುಕೊಂಡ ಪರಿಣಾಮ ತ್ರಿಶಂಕು ಸ್ಥಿತಿಗೆ ತಲುಪಿತ್ತು.
|