ತೀವ್ರವಾದ ಮತ್ತು ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಭಾರತ ಕಂಕಣಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬುಧವಾರ ತಿಳಿಸಿದರು.
ತೀವ್ರವಾದ ಮತ್ತು ಭಯೋತ್ಪಾದನೆ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಡಬೇಕೆಂದು ಜನತೆಗೆ ಕರೆ ನೀಡಿದರು.
ರಾಷ್ಟ್ರದ 61ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು.
'ವೈವಿಧ್ಯತೆಯಲ್ಲಿ ಏಕತೆಯಿಂದ ನಮ್ಮ ಬಲವು ನಿಂತಿದೆ. ದ್ವೇಷ ಮತ್ತು ತೀವ್ರವಾದವನ್ನು ಬಿತ್ತುವವರಿಗೆ, ಕೋಮುವಾದದ ವೈರಸ್ ಹರಡುವವರಿಗೆ ಮತ್ತು ಹಿಂಸೆ ಮತ್ತು ಭಯೋತ್ಪಾದನೆಯಲ್ಲಿ ನಂಬಿಕೆ ಉಳ್ಳವರಿಗೆ ಈ ಸಮಾಜದಲ್ಲಿ ಸ್ಥಾನವಿಲ್ಲ. ನಾವು ಇಂತಹ ಪ್ರಜಾತಂತ್ರ ವಿರೋಧಿ, ಸಮಾಜ ವಿರೋಧಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ನಮ್ಮದೇ ರೀತಿಯಲ್ಲಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಜಾತಿ, ಭಾಷೆ ಮತ್ತು ಜನಾಂಗದ ಬೇಧವಿಲ್ಲದೇ ಎಲ್ಲ ಜನರ ಜತೆ ಉತ್ತಮ ಬಾಂಧವ್ಯದ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅವರು ಪ್ರತಿಪಾದಿಸಿದರು.
ಪೂರ್ವ ಮತ್ತು ಪಶ್ಚಿಮ ಹಾಗೂ ದಕ್ಷಿಣ ಮತ್ತು ಉತ್ತರದ ಎಲ್ಲ ಸಣ್ಣ ಮತ್ತು ದೊಡ್ಡ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಬಾಂಧವ್ಯವನ್ನು ಹೊಂದಲು ಬಯಸುತ್ತದೆ
ಜಗತ್ತಿನ ಎಲ್ಲ ರಾಷ್ಟ್ರಗಳ ಜತೆ ಶಾಂತಿ ಮತ್ತು ಉತ್ತಮ ಬಾಂಧವ್ಯವನ್ನು ನಾವು ಬಯಸುತ್ತೇವೆ. ನಮ್ಮ ನೆರೆಹೊರೆಯ ರಾಷ್ಟ್ರಗಳ ಸುಖ, ಸಮೃದ್ಧಿಯು ನಮ್ಮ ಭದ್ರತೆ ಮತ್ತು ಪ್ರಗತಿಗೆ ಬುನಾದಿಯಾಗಿದೆ ಎಂದು ಪ್ರಧಾನಿ ಹೇಳಿದರು.
|