ಲಕ್ನೋದಿಂದ ಮೈಸೂರು ಮೃಗಾಲಯಕ್ಕೆ ಕರೆತರಲಾಗುತ್ತಿದ್ದ ಹೆಣ್ಣು ಜಿರಾಫೆಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಖುಷಿ ಹೆಸರಿನ ಈ ಜಿರಾಫೆಯನ್ನು ವಿನಿಮಯ ಕಾರ್ಯಕ್ರಮದಡಿಯಲ್ಲಿ ಮೈಸೂರು ಮೃಗಾಲಯಕ್ಕೆ ಕರೆದು ತರಲಾಗುತ್ತಿತ್ತು. ಅದನ್ನು ಒಯ್ಯಲು ಬಳಸಿದ ಬೋನಿನೊಳಗೆ ಅದನ್ನು ಸೇರಿಸುವ ಯತ್ನದಲ್ಲಿ ಎಡವಟ್ಟಾಗಿ ಜಿರಾಫೆ ತೀವ್ರವಾಗಿ ಗಾಯಗೊಂಡಿತು.
ಈ ಹಿನ್ನೆಲೆಯಲ್ಲಿ ಆರೋಪ ಪ್ರತ್ಯಾರೋಪ ಆರಂಭವಾಗಿದ್ದು, ಮೈಸೂರಿನಿಂದ ಕಳುಹಿಸಿರುವ ಬೋನು ತೀರಾ ಚಿಕ್ಕದಾಗಿತ್ತು ಎಂದು ಲಕ್ನೋ ಮೃಗಾಲಯ ಅಧಿಕಾರಿಗಳು ಆರೋಪಿಸಿದ್ದಾರೆ.
ಜಿರಾಫೆಯನ್ನು ಒಯ್ಯಲು ಬೇಕಾದ ಬೋನಿನಲ್ಲಿ ಅದು ಅತ್ತಿತ್ತ ತಿರುಗಾಡುವಂತಾಗಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ. ಈಗ ಮೈಸೂರು ಅಧಿಕಾರಿಗಳು ಒದಗಿಸಿರುವುದಕ್ಕಿಂತ ಕನಿಷ್ಠ ಎರಡು ಪಟ್ಟು ದೊಡ್ಡದಾದ ಬೋನಿನ ಅಗತ್ಯವಿರುತ್ತದೆ ಎಂದು ಲಕ್ನೋ ಮೃಗಾಲಯದ ನಿರ್ದೇಶಕ ಇವಾ ಶರ್ಮಾ ತಿಳಿಸಿದ್ದಾರೆ.
ಆದರೆ, ದೊಡ್ಡ ಬೋನು ಒದಗಿಸಿದಲ್ಲಿ ಅದು ಜಿರಾಫೆಗೆ ಹಾನಿಕರವಾಗುತ್ತದೆ. ಅದರೊಳಗೆ ಅದು ಪ್ರಯಾಣದ ವೇಳೆ ಅತ್ತಿತ್ತ ಹೊಯ್ದಾಡುತ್ತದೆ ಮತ್ತು ಅದಕ್ಕೆ ಗಾಯವಾಗುವ ಸಂಭಾವ್ಯತೆ ಹೆಚ್ಚು ಎಂಬುದು ಮೈಸೂರು ಮೃಗಾಲಯ ಅಧಿಕಾರಿಗಳ ಸ್ಪಷ್ಟನೆ.
ಹೆಚ್ಚು ಸ್ಥಳಾವಕಾಶವಿದ್ದರೆ ಆ ಪ್ರಾಣಿಗೆ ಒದೆತಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈಗ ನಾವು ನೀಡಿದ ಬೋನು ಅದಕ್ಕೆ ಮಲಗಲು, ಅತ್ತಿತ್ತ ಓಡಾಡಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಸಾಕಾಗುವಷ್ಟು ಸ್ಥಳಾವಕಾಶ ಹೊಂದಿದೆ ಎಂದು ಮೈಸೂರು ಮೃಗಾಲಯ ಉಪನಿರ್ದೇಶಕ ಆರ್.ನಂಜಪ್ಪ ತಿಳಿಸಿದ್ದಾರೆ.
|