ನವದೆಹಲಿ-ಅಣ್ವಸ್ತ್ರ ಪರೀಕ್ಷೆ ನಡೆಸುವ ಸಾರ್ವಬೌಮ ಹಕ್ಕನ್ನು ತಾನು ಹೊಂದಿರುವುದಾಗಿ ಸರ್ಕಾರವಿಂದು ಪ್ರತಿಪಾದಿಸಿತು. ಅಮೆರಿಕದ ಜತೆ ದ್ವಿಪಕ್ಷೀಯ ಒಪ್ಪಂದವು ಅಣ್ವಸ್ತ್ರ ಪರೀಕ್ಷೆ ನಡೆಸುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತು.
ಲೋಕಸಭೆಯಲ್ಲಿ ಎಡಪಕ್ಷಗಳು ಮತ್ತು ಪ್ರತಿಪಕ್ಷ ಈ ವಿಷಯವನ್ನು ಕೆದಕಿ ತೀವ್ರ ಗದ್ದಲವೆಬ್ಬಿಸಿದ ಬಳಿಕ ವಿದೇಶಾಂಗ ವ್ಬವಹಾರಗಳ ಸಚಿವ ಪ್ರಣಬ್ ಮುಖರ್ಜಿ ಸಂಕ್ಷಿಪ್ತ ಹೇಳಿಕೆಯೊಂದನ್ನು ನೀಡಿದರು.
"ಮುಂಬರುವ ಸರ್ಕಾರ ಅಣ್ವಸ್ತ್ರ ಪರೀಕ್ಷೆ ನಡೆಸದಂತೆ ಕೈಗಳನ್ನು ಕಟ್ಟಿಹಾಕುವಂಥ ಯಾವುದೇ ವಿಷಯವು ಅಮೆರಿಕದ ಜತೆ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದದಲ್ಲಿ ಇಲ್ಲ "ಎಂದು ಅವರು ಸ್ಪಷ್ಟಪಡಿಸಿದರು.
ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಅದರ ಜತೆ ಎಲ್ಲ ಪರಮಾಣು ಸಹಕಾರ ಒಪ್ಪಂದಗಳನ್ನು ರದ್ದುಮಾಡಲಾಗುವುದು ಎಂಬ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆಯನ್ನು ವಿರೋಧಿಸಿ ಸದಸ್ಯರು ಸಂಸತ್ತಿನಲ್ಲಿ ತೀವ್ರ ಗದ್ದಲವೆಬ್ಬಿಸಿದ್ದರು.
|