ನವದೆಹಲಿ-1500 ಕೈದಿಗಳನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡುವ ಆಂಧ್ರಪ್ರದೇಶ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಬಿ.ಎನ್. ಅಗರವಾಲ್ ಮತ್ತು ಡಿ.ಕೆ. ಜೈನ್ ಅವರಿದ್ದ ಪೀಠ ಈ ಕುರಿತು ಎರಡು ವಾರಗಳಲ್ಲಿ ಉತ್ತರ ನೀಡುವಂತೆ ರಾಜ್ಯಸರ್ಕಾರಕ್ಕೆ ತಿಳಿಸಿ, ವಿಚಾರಣೆಯನ್ನು ಮುಂದೂಡಿದರು.
ಜೈಲು ಶಿಕ್ಷೆ ಅನುಭವಿಸುತ್ತಿರುವ ಕ್ರಿಮಿನಲ್‌ಗಳನ್ನು ಶಿಕ್ಷಾವಧಿ ಪೂರೈಸುವ ಮುನ್ನವೇ ಬಿಡುಗಡೆ ಮಾಡುವ ಸಂವಿಧಾನಿಕ ಮತ್ತು ಶಾಸನಬದ್ದ ಹಕ್ಕನ್ನು ಸರ್ಕಾರ ಹೊಂದಿದೆ ಎಂಬ ವಾದವನ್ನು ತಳ್ಳಿಹಾಕಿದ ಕೋರ್ಟ್, ಇಂತಹ ಕ್ರಮವು ಸಮಾಜಕ್ಕೆ ಪಿಡುಗಾಗಿ ಪರಿಣಮಿಸಬಹುದೆಂದು ಎಚ್ಚರಿಸಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯನ್ನು 7 ವರ್ಷಗಳ ಬಳಿಕ ಬಿಡುಗಡೆ ಮಾಡಬಹುದೆಂದು ನೀವು ಹೇಳುವಂತಿಲ್ಲ.
ಮುಂದಿನ ದಿನಗಳಲ್ಲಿ ಮುಂಬೈ ಬಾಂಬ್ ಸ್ಫೋಟದ ಆರೋಪಿಗಳು ಅಥವಾ ನಿಥಾರಿ ಹಂತಕರು ಇದೇ ತೆರನಾದ ಅನುಕೂಲ ಮಾಡುವಂತೆ ಒತ್ತಾಯಿಸುವ ಹಂತವೂ ಬರಬಹುದು ಎಂದು ಕೋರ್ಟ್ ತಿಳಿಸಿತು.
|