ಬಿಹಾರ, ಉತ್ತರಖಂಡ ಮತ್ತು ಉತ್ತರಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ನದಿಗಳು ಅಪಾಯಕರ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ತೀವ್ರ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬದರಿನಾಥ ಮಂದಿರಕ್ಕೆ ಯಾತ್ರೆಯನ್ನು ರದ್ದುಮಾಡಲಾಗಿದೆ.
ಬಿಹಾರದಲ್ಲಿ ನಾಲ್ಕು ಜಿಲ್ಲೆಗಳಿಂದ ಇನ್ನೂ 13 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಪ್ರಸಕ್ತ ಪ್ರವಾಹದ ದೆಸೆಯಿಂದ ಸತ್ತವರ ಸಂಖ್ಯೆ 300ಕ್ಕೆ ಏರಿದೆ. ಪ್ರವಾಹದಿಂದ 271 ಕೋಟಿ ರೂ. ಮೌಲ್ಯದ ಬೆಳೆಗಳಿಗೆ ಹಾನಿಯಾಗಿದ್ದು, 1,59,500 ಮನೆಗಳಿಗೆ ಹಾನಿ ಸಂಭವಿಸಿದೆ. ಸುಮಾರು 1.5 ಕೋಟಿ ಜನರು ಸಂತ್ರಸ್ತರಾಗಿದ್ದಾರೆ.
ಹಿಮಾಚಲಪ್ರದೇಶದ ಘಾನ್ವಿ ಗ್ರಾಮದಲ್ಲಿ ಪ್ರವಾಹದಿಂದ ನಾಶಗೊಂಡ ಮನೆಗಳ ಅವಶೇಷಗಳಿಂದ ಗುರುವಾರದಿಂದೀಚೆಗೆ ಇನ್ನೂ ಎರಡು ದೇಹಗಳನ್ನು ಹೊರತೆಗೆಯಲಾಗಿದೆ. ಆದಾಗ್ಯೂ 45 ಜನರು ಇನ್ನೂ ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಖಂಡದ ಹಲವಾರು ಭಾಗಗಳಲ್ಲಿ ಮಳೆಯು ತನ್ನ ಪ್ರಕೋಪವನ್ನು ತೋರಿಸಿದ್ದು, 40 ಜನರನ್ನು ಬಲಿತೆಗೆದುಕೊಂಡಿದೆ ಮತ್ತು ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ.
|