ಸರಕಾರ ಮತ್ತು ಎಡಪಕ್ಷಗಳ ನಡುವೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು ಪರಿಹಾರಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲ ಹಿಂದೆಗೆದುಕೊಳ್ಳುವುದು ಅನಿವಾರ್ಯ ಎಂಬಂತೆ ಕಾಣುತ್ತಿದೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಗುರುವಾರ ರಾತ್ರಿ ಈ ವಿಷಯವನ್ನು ಹೊರಗೆಡವಿದ್ದಾರೆ.
ಸುದ್ದಿಚಾನೆಲ್‌ವೊಂದರ ಜತೆ ಮಾತನಾಡುತ್ತಿದ್ದ ಅವರು ಒಪ್ಪಂದದ ಬಗ್ಗೆ ಸರ್ಕಾರ ಮತ್ತು ಎಡಪಕ್ಷಗಳ ದೃಷ್ಟಿಕೋನ ಹೊಂದಾಣಿಕೆಯಾಗುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ತಿಳಿಸಿದರು..
ಸರ್ಕಾರವನ್ನು ಉಳಿಸಲು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಉಳಿದಿರುವ ಒಂದೇ ದಾರಿಯೆಂದರೆ, ಪರಮಾಣು ಒಪ್ಪಂದವನ್ನು ಅನುಷ್ಠಾನಕ್ಕೆ ತರುವ ಕಾರ್ಯಾಚರಣೆಯನ್ನು ಕೈಬಿಡುವುದು ಎಂದವರು ತಿಳಿಸಿದರು.
ಪ್ರಧಾನಮಂತ್ರಿ ಇದನ್ನು ನಿರಾಕರಿಸಿದರೆ ಏನು ಮಾಡುತ್ತೀರಿ ಎಂದು ಪ್ರಶ್ನೆಗೆ, ಹಾಗಾದರೆ ಬೆಂಬಲ ವಾಪಸಾತಿಯಿಂದ ಸರ್ಕಾರ ಹೇಗೆ ತಪ್ಪಿಸಿಕೊಳ್ಳುತ್ತದೆಂದು ಗೊತ್ತಾಗುತ್ತಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಜನತೆ ಸ್ಥಿರ ಸರ್ಕಾರವನ್ನು ಬಯಸುತ್ತದೆ ಎನ್ನುವುದು ನಿಜ. ಆದರೆ ಅದೇ ಸಂದರ್ಭದಲ್ಲಿ ಇನ್ನೊಂದು ರಾಷ್ಟ್ರಕ್ಕೆ, ವಿಶೇಷವಾಗಿ ಸಾಮ್ರಾಜ್ಯಶಾಹಿ ಶಕ್ತಿಗೆ ಅಡಿಯಾಳಾಗಿರುವ ರಾಷ್ಟ್ರವನ್ನು ಜನತೆ ಬಯಸುವುದಿಲ್ಲ ಎಂದು ಬರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದರು.
"ಮಧುಚಂದ್ರ ಮುಗಿದಿದೆ. ಅನಿವಾರ್ಯವಾದರೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ಎಡಪಕ್ಷ ಹೇಸುವುದಿಲ್ಲ. ಪ್ರಧಾನಮಂತ್ರಿಯರಿಗೆ ಇದು ಗೊತ್ತಿರದ ವಿಷಯವೇನಲ್ಲ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
|