ಎನ್‌ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಪ್ರಧಾನಮಂತ್ರಿ ಮನಮೋಹನ ಸಿಂಗ್ ವಿರುದ್ಧ ಮಾಡಿದ ಟೀಕೆಯಿಂದ ಅನೇಕ ಸಂಸದರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸರ್ಕಾರದ ಅಧಿಪತಿಯಾದ ಪ್ರಧಾನಿ ವಿರುದ್ಧ ಇಂತಹ ಪ್ರತಿಕ್ರಿಯೆ ಭಯೋತ್ಪಾದಕರಿಗೆ ಪ್ರಚೋದನೆ ನೀಡುತ್ತದೆ ಎಂದು ಆಳುವ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.
ಇದು ಚೀನಾ ದೇಶವಾಗಿದ್ದರೆ ಅವರ ತಲೆಗೆ ಗುಂಡು ಹೊಡೆದು ಕೊಲ್ಲುತ್ತಿದ್ದರು ಎಂದು ಪ್ರಧಾನಿ ವಿರುದ್ಧ ಫರ್ನಾಂಡಿಸ್ ಟೀಕೆ ಮಾಡಿದ್ದರು.
ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪಿ.ಆರ್. ದಾಸ್‌ಮುನ್ಷಿ ಫರ್ನಾಂಡಿಸ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಅವರು ಕ್ಷಮಾಪಣೆ ಕೋರಬೇಕು ಅಥವಾ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚಿದಂಬರಂ, ಸೈಫುದ್ದೀನ್ ಸೋಜ್, ಬಿ.ಕೆ. ಹ್ಯಾಂಡಿಕ್ ಮುಂತಾದ ಸಚಿವರು, ಸಮ್ಮಿಶ್ರ ಕೂಟದ ಸದಸ್ಯರು ಮತ್ತು ಎಡಪಕ್ಷಗಳ ಸದಸ್ಯರು ಕೂಡ ಫರ್ನಾಂಡಿಸ್ ವಿರುದ್ಧ ಪ್ರತಿಭಟನೆ ನಡೆಸಿದರು. ಸದನದಲ್ಲಿ ಉಪಸ್ಥಿತರಿದ್ದ ಫರ್ನಾಂಡಿಸ್ ನಗುತ್ತಿರುವಂತೆ ಕಂಡುಬಂದರು.
|