ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಹಾಗೂ ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಮ್ ಯೆಚೂರಿ ಅವರು ಇಂದು ಸಂಜೆ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದು,ಮಹತ್ವದ ಮಾತುಕತೆ ನಡೆಸುತ್ತಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಭಾರತ ಮತ್ತು ಅಮೆರಿಕ ನಡುವೆ ನಡೆದಿರುವ 123ನಾಗರಿಕ ಪರಮಾಣು ಒಪ್ಪಂದದ ವಿರೋಧದಿಂದ ಹಿಂದಕ್ಕೆ ಸರಿಯದ ಎಡಪಕ್ಷಗಳು ಈ ಮಾತುಕತೆಯಲ್ಲಿ,ಒಪ್ಪಂದವನ್ನು ಅನುಷ್ಠಾನಗೊಳಿಸದಿರುವಂತೆ ಚರ್ಚೆ ನಡೆಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಭಾಗವಹಿಸುತ್ತಿದ್ದು,ಎರಡು ಪಕ್ಷಗಳ ನಡುವೆ ಸಂಧಾನದ ಮಾತುಕತೆ ನಡೆಯುವ ಸಾಧ್ಯತೆಗಳಿರುವುದಾಗಿ ಮೂಲಗಳು ಭರವಸೆ ವ್ಯಕ್ತಪಡಿಸಿವೆ.
ಈಗಾಗಲೇ ಎಡಪಕ್ಷಗಳು ಎರಡು ದಿನಗಳ ಪಾಲಿಟ್ ಬ್ಯೂರೋ ಸಭೆಯನ್ನು ನಡೆಸಿದ್ದು,ಲೋಕಸಭೆಯಲ್ಲಿ 43ಸಂಸದರನ್ನು ಹೊಂದಿದೆ.ಈ ನಿಟ್ಟಿನಲ್ಲಿ ಶುಕ್ರವಾರದಂದು ಪ್ರಧಾನಿಯವರು ಎಡಪಕ್ಷದ ಹಿರಿಯ ಮುಖಂಡರು ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು.
ನಿನ್ನೆ ನಡೆದ ಭೋಜನ ಕೂಟದ ಮಾತುಕತೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರು,ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಭಾಗವಹಿಸಿದ್ದರು. ಕಳೆದ ವಾರ ಎಡಪಕ್ಷಗಳು ಮೈತ್ರಿಕೂಟದಿಂದ ಬೆಂಬಲವನ್ನು ಹಿಂದೆಗೆಯುವ ಪ್ರಸ್ತಾಪ ಮಾಡಿದ್ದವು.
ಇದಕ್ಕೆ ಸಂಬಂಧಿಸಿದಂತೆ ಎಡಪಕ್ಷದ ಪಾಲಿಟ್ ಬ್ಯೂರೋ ಸಭೆ ಇಂದು ಅಂತಿಮಗೊಳ್ಳಲಿದ್ದು,ಅಲ್ಲಿ ಪಕ್ಷದ ನಿರ್ಧಾರವನ್ನು ನಿರ್ಣಯಿಸಲಿವೆ ಎಂದು ಹೇಳಿವೆ. ಅಲ್ಲದೇ ಕೆಲವೊಂದು ಷರತ್ತಿನ ಮೇಲೆ ಯುಪಿಎಗೆ ಬೆಂಬಲವನ್ನು ಮುಂದುವರಿಸುವುದಾಗಿ ಎಡಪಕ್ಷ ತಿಳಿಸಿದೆ.
ಪ್ರಧಾನಿಯವರೊಂದಿಗೆ ಚರ್ಚಿಸಿದ ಬಳಿಕ, ಎಡಪಕ್ಷ ಮತ್ತು ಪ್ರಧಾನಿಯವರು ಸೇರಿ ತಮ್ಮ ನಿರ್ಧಾರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
|