ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ 63 ಜನ್ಮದಿನಾಚರಣೆಯಾದ ಸೋಮವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್,ಪ್ರಧಾನಮಂತ್ರಿ ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರ ಕಾಂಗ್ರೆಸ್ ಧುರೀಣರು ದಿವಂಗತ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಗೃಹಸಚಿವ ಶಿವರಾಜ್ ಪಾಟೀಲ್, ವಿತ್ತಸಚಿವ ಪಿ. ಚಿದಂಬರಂ ಮತ್ತು ರಕ್ಷಣಾ ಸಚಿವ ಎ.ಕೆ. ಆಂಟನಿ ಮುಂತಾದವರು ಮಾಜಿ ಪ್ರಧಾನಿಯ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸಿ, ಗೌರವ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪುತ್ರರಾದ ರಾಹುಲ್ ಗಾಂಧಿ,ಪುತ್ರಿ ಪ್ರಿಯಾಂಕಾ, ಅವರ ಪತಿ ರಾಬರ್ಟ್ ವಡೇರಾ ಹಾಗೂ ಅವರ ಇಬ್ಬರು ಪುತ್ರರೊಂದಿಗೆ ಅಗಲಿದ ನಾಯಕನ ಸ್ಮಾರಕವಿರುವ ವೀರಭೂಮಿಗೆ ತೆರಳಿ ಗೌರವಾರ್ಪಣೆ ಮಾಡಿದರು.
ರಾಜೀವ್ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ಮಾಜಿ ಪ್ರಧಾನಿ ಸ್ಮರಣಾರ್ಥ ಘೋಷಣೆ ಕೂಗಿದರು.
|