ರಾಷ್ಟ್ರದ ಇಂಧನ ಭದ್ರತೆಗೆ ನಿರ್ಣಾಯಕವಾಗಿರುವ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೋಮವಾರ ತಿಳಿಸಿದರು.
ರಾಜಕೀಯ ಪಕ್ಷಗಳು ಪರಮಾಣು ಶಕ್ತಿಯ ಪ್ರಾಮುಖ್ಯತೆಯನ್ನು ಅರಿಯಬೇಕು ಎಂದು ಎಡಪಕ್ಷಗಳಿಗೆ ಪರೋಕ್ಷವಾಗಿ ಅವರು ಕರೆ ನೀಡಿದರು.ರಾಜಧಾನಿಯಲ್ಲಿ ಒಎನ್‌ಜಿಸಿ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪರಮಾಣು ಒಪ್ಪಂದದ ಬಗ್ಗೆ ರಾಜಿ ಸೂತ್ರವನ್ನು ರೂಪಿಸಲು ಸಿಪಿಎಂ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ದೃಢ ಸೂತ್ರವನ್ನು ರಚಿಸಲಾಗಿಲ್ಲ. ಹೈಡ್ ಕಾಯ್ದೆಯ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಬಹುದಾದರೂ, ಐಎಇಎ ಮತ್ತು ಎನ್‌ಎಸ್‌ಜಿ ರಾಷ್ಟ್ರಗಳ ಜತೆ ಮಾತುಕತೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ . ಆದರೆ ರಾಜಕೀಯ ವರ್ಣಪಟಲದ ಇನ್ನೊಂದು ಕಡೆ ನಿಲುವು ಮತ್ತಷ್ಟು ಬಿಗಿಯಾಗುತ್ತಿದೆ. ಪರಮಾಣು ಪರೀಕ್ಷೆಯನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ಕುಟುಂಬದ ವ್ಯವಹಾರವನ್ನಾಗಿಸುತ್ತಿದೆ ಎಂದು ಪ್ರತಿಪಕ್ಷ ಎನ್‌ಡಿಎ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದ್ದು, ಈ ಒಪ್ಪಂದದ ಬಗ್ಗೆ ಸಂಸದೀಯ ಸಮಿತಿಯೊಂದನ್ನು ರಚಿಸಬೇಕೆಂದು ಒತ್ತಾಯಿಸಿದೆ.
ಈ ವಿಷಯ ಇಡೀ ರಾಷ್ಟ್ರವನ್ನು ಒಳಗೊಂಡಿದೆ. ಪರಮಾಣು ಪರೀಕ್ಷೆ ಪರಿಶೀಲನೆಗೆ ಸಮಿತಿ ರಚಿಸುವುದಾದರೆ ಉಭಯ ಸದನಗಳ ಎಲ್ಲ ಪಕ್ಷಗಳನ್ನು ಒಳಗೊಂಡ ಸಂಸದೀಯ ಸಮಿತಿಯನ್ನು ರಚಿಸಬೇಕು. ಸಮಿತಿ ತನ್ನ ವರದಿ ಸಲ್ಲಿಸುವವರೆಗೆ ಒಪ್ಪಂದವನ್ನು ಜಾರಿಗೆ ತರುವ ಯಾವುದೇ ನಡೆ ಇರವಾರದು ಎಂದು ವಿ.ಕೆ. ಮಲ್ಹೋತ್ರಾ ತಿಳಿಸಿದರು.
|