ಸರಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಭಾರತ-ಅಮೆರಿಕ ನಡುವಣ ಪರಮಾಣು ಒಪ್ಪಂದದ ಕುರಿತು ಆಗಸ್ಟ್ 29 ಅಥವಾ 30ರಂದು ಲೋಕಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.
ನವದೆಹಲಿಯಲ್ಲಿ ಮಂಗಳವಾರ ಈ ವಿಷಯದ ಕುರಿತು ಸುಳಿವು ನೀಡಿದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಿಯರಂಜನ್ ದಾಸ್‌ಮುನ್ಶಿ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ಲಭ್ಯತೆಯನ್ನು ಆಧರಿಸಿ ಲೋಕಸಭೆಯಲ್ಲಿ ಚರ್ಚೆಯ ದಿನ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಖರ್ಜಿಯವರು ಈ ಕುರಿತ ಪ್ರಶ್ನೆಗಳಿಗೆ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ ಅವರು, ಆದರೆ ಪ್ರಧಾನಿ ಮಧ್ಯಪ್ರವೇಶ ಮಾಡುವರೇ ಎಂಬ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುವುದರಿಂದ ನುಣುಚಿಕೊಂಡರು.
ಪ್ರಧಾನಿ ಮಧ್ಯಪ್ರವೇಶಿಸಲೂ ಬಹುದು. ಈ ಬಗ್ಗೆ ಅವರೊಂದಿಗೆ ತಾನು ಮಾತನಾಡಿಲ್ಲ ಎಂದವರು ಹೇಳಿದರು. ಒಪ್ಪಂದದ ಕುರಿತು ಚರ್ಚೆಯ ವೇಳೆ ಎಡಪಕ್ಷಗಳ ಆಕ್ಷೇಪದ ಬಗ್ಗೆ ಸರಕಾರದ ನಿಲುವನ್ನು ಪ್ರಕಟಿಸುವ ನಿರೀಕ್ಷೆ ಇದೆ.
|