ಮಾಜಿ ಕೇಂದ್ರ ಸಚಿವ ಶಿಬು ಸೊರೆನ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಜಾ ಹತ್ಯೆಯ ಆರೋಪಗಳಿಗೆ ಸಂಬಂಧಿಸಿದಂತೆ ಬುಧವಾರ ಬಂಧಮುಕ್ತಿಗೊಳಿಸಲಾಗಿದೆ. 1992ರಲ್ಲಿ ತಮ್ಮ ಆಪ್ತ ಕಾರ್ಯದರ್ಶಿ ಜಾ ಅವರನ್ನು ಅಪಹರಿಸಿ, ಹತ್ಯೆ ಮಾಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು.
ಸೊರೆನ್ ಮತ್ತು ಇನ್ನೂ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣೆ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾ ಮಾಡಿ, ಹತ್ಯೆ ಆರೋಪವನ್ನು ಸಾಬೀತು ಮಾಡಲು ಸಿಬಿಐ ವಿಫಲವಾಗಿದೆ ಎಂದು ಆರ್. ಎಸ್. ಸೋಧಿ ಮತ್ತು ಎಚ್.ಆರ್. ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
"ಹೊರತೆಗೆದ ಅಸ್ಥಿಪಂಜರ ಶಶಿಕಾಂತ್ ಜಾಗೆ ಸೇರಿದ್ದೆಂದು ರುಜುವಾತು ಮಾಡಲು ಸಿಬಿಐ ವಿಫಲವಾಗಿದೆ. ದೇಹವು ಶಶಿಕಾಂತ್ ಜಾದೆಂದು ಸಾಬೀತು ಮಾಡಲು ಯಾವುದೇ ವಿಧಾನದಲ್ಲಿ ಸಾಧ್ಯವಾಗದಿರುವುದರಿಂದ ಎಲ್ಲ ಐವರು ಆರೋಪಿಗಳನ್ನು ಬಂಧಮುಕ್ತಗೊಳಿಸಲಾಗುವುದು ಎಂದು ನ್ಯಾಯಮೂರ್ತಿ ಆರ್. ಎಸ್.ಸೋಧಿ ತಿಳಿಸಿದರು . 62 ವರ್ಷ ಪ್ರಾಯದ ಜಾರ್ಖಂಡ್ ಬುಡಕಟ್ಟು ನಾಯಕ ಸೊರೆನ್ ಅವರಿಗೆ ನವೆಂಬರ್ 28ರಂದು ಶಿಕ್ಷೆ ವಿಧಿಸಿದ ಬಳಿಕ ಕೇಂದ್ರ ಕಲ್ಲಿದ್ದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಚಿರುಡಿ ಹತ್ಯಾಕಾಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರೆನ್ ಪ್ರಸಕ್ತ ಜಾರ್ಖಂಡ್‌ನ ಜಮ್ತಾರಾ ಕಾರಾಗೃಹದಲ್ಲಿದ್ದಾರೆ.
|