ಎರಡು ದಿನಗಳ ಯಾತನಾಮಯ ಕಾಯುವಿಕೆ ಬಳಿಕ ಬಾಲಿವುಡ್ ನಟ ಸಂಜಯ ದತ್‌ಗೆ ಕೊನೆಗೂ ಬಿಡುಗಡೆಯ ಯೋಗ ಸಿಕ್ಕಿದೆ. ಪುಣೆಯ ಯರವಾಡ ಜೈಲಿನಿಂದ ದತ್ ಗುರುವಾರ ಮುಂಜಾನೆ ಹೊರಗೆ ಬಂದಿದ್ದಾರೆ.
ತಮ್ಮ ಭಾವಮೈದುನ ಕುಮಾರ್ ಗೌರವ್, ಸ್ನೇಹಿತ ಯೂಸುಫ್ ನಲ್ವಾಲಾ ಮತ್ತು ವಕೀಲ ಸತೀಶ್ ಮಾನೆಶಿಂದೆ ಅವರನ್ನು ದತ್ ಜತೆಗೂಡಿದರು. ತಕ್ಷಣವೇ ತಮಗಾಗಿ ಕಾಯುತ್ತಿದ್ದ ಟಾಟಾ ಸುಮೊ ಏರಿದ ದತ್ ಪುಣೆಯ ವಿಮಾನನಿಲ್ದಾಣಕ್ಕೆ ತೆರಳಿ ಮುಂಬೈನ ವಿಮಾನವೇರಿದರು.
ಬಿಳಿಯ ಪಟ್ಟಿ ಅಂಗಿ ಮತ್ತು ಮಸುಕಾದ ನೀಲಿ ಜೀನ್ಸ್ ಧರಿಸಿದ್ದ ದತ್ ಜೈಲಿನ ಹೊರಗೆ ತಮಗೋಸ್ಕರ ಕಾಯುತ್ತಿದ್ದ ಪತ್ರಕರ್ತರತ್ತ ಹೆಚ್ಚು ಕೈಬೀಸದೇ ವಾಹನದೊಳಕ್ಕೆ ಕುಳಿತರು.
ಜೈಲಿಗೆ ಕರೆತಂದಾಗ ಧರಿಸಿದ್ದ ಉಡುಪುಗಳಿದ್ದ ಪ್ಲ್ಯಾಸ್ಟಿಕ್ ಚೀಲ ದತ್ ಕೈಯಲ್ಲಿತ್ತು. ವಾಹನದೊಳಕ್ಕೆ ಕುಳಿತುಕೊಳ್ಳುವ ಮುಂಚೆ ಜೈಲು ಕಾವಲುಗಾರರ ಕೈಕುಲುಕಿದರು. ದತ್ ಅವರಿಗಾಗಿ ಜೈಲಿನ ಹೊರಗೆ ಸೇರಿದ್ದ ಜನರ ಗುಂಪಿನಿಂದ ತಪ್ಪಿಸಿಕೊಳ್ಳಲು ಮುಂಜಾನೆ 5.30ಕ್ಕೆ ಅವರನ್ನು ಬಿಡುಗಡೆ ಮಾಡಲಾಯಿತು.
|