ಮುಂಬೈನಲ್ಲಿ 1993ರ ಕೋಮುಗಲಭೆಗೆ ಸಂಬಂಧಿಸಿದಂತೆ ಶ್ರೀಕೃಷ್ಣ ಆಯೋಗ ಗುರುತಿಸಿದ ತಪ್ಪಿತಸ್ಥರನ್ನು ಸರ್ಕಾರ ಶಿಕ್ಷಿಸದೇ ಬಿಡುವುದಿಲ್ಲ ಎಂದು ಲೋಕಸಭೆಗೆ ಶುಕ್ರವಾರ ತಿಳಿಸಲಾಯಿತು.
ಶೂನ್ಯವೇಳೆಯಲ್ಲಿ ಸಿಪಿಎಂ ಧುರೀಣ ಹನ್ನನ್ ಮೊಲ್ಲಾ ಈ ವಿಷಯವನ್ನು ಪ್ರಸ್ತಾಪಿಸಿ, ಶ್ರೀಕೃಷ್ಣ ಆಯೋಗದ ವರದಿ ಸಲ್ಲಿಕೆಯಾಗಿ 9 ವರ್ಷಗಳು ಕಳೆಯಿತು. ಆದರೆ ವರದಿಯಲ್ಲಿ ಗುರುತಿಸಲಾದ 31 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಗಲಭೆಗೆ ಪ್ರಚೋದಿಸಿದ ಕೆಲವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. . ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸುವ ಬದಲಿಗೆ ಬಡ್ತಿ ನೀಡಲಾಯಿತು ಎಂದು ಖಾರವಾಗಿ ಹೇಳಿದರು.ಅವರ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ದಾಸ್‌ಮುನ್ಷಿ ಶ್ರೀಕೃಷ್ಣ ಆಯೋಗ ತಪ್ಪಿತಸ್ಥರೆಂದು ಗುರುತಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ವಿಚಾರದ ಬಗ್ಗೆ ತೀವ್ರ ಕಾಳಜಿ ವಹಿಸಿದ್ದಾರೆ.
ಆಯೋಗದ ಶಿಫಾರಸುಗಳನ್ನು ಆಂಶಿಕವಾಗಿ ಪಾಲಿಸಿದ್ದು, ಉಳಿದ ಶಿಫಾರಸುಗಳ ಬಗ್ಗೆ ತಮ್ಮ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುತ್ತದೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಹೇಳಿದ್ದನ್ನು ದಾಸ್‌ಮುನ್ಷಿ ಸದಸ್ಯರ ಗಮನಕ್ಕೆ ತಂದರು.
|