ಆಂಧ್ರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಸೋಮವಾರ ಆರೋಪಿಸಿದರು. ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅಧಿಕಾರದಲ್ಲಿ ಒಂದು ನಿಮಿಷವೂ ಮುಂದುವರಿಯುವ ನೈತಿಕ ಹಕ್ಕು ಹೊಂದಿಲ್ಲ ಎಂದು ನಾಯ್ಡು ಟೀಕಿಸಿದರು.
ನಗರವನ್ನು ತಲ್ಲಣಗೊಳಿಸಿದ ಅವಳಿ ಸ್ಫೋಟ ರಾಜ್ಯ ಇತಿಹಾಸದಲ್ಲಿ ಕಂಡುಕೇಳರಿಯದ ಘಟನೆ. ಗುಪ್ತಚರ ಇಲಾಖೆಯ ನೇರ ವೈಫಲ್ಯದಿಂದ ಈ ಅನಾಹುತ ಸಂಭವಿಸಿದೆ ಎಂದು ತಮ್ಮ ಪಕ್ಷದ ಪಾಲಿಟ್‌ಬ್ಯೂರೋದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಅವರು ವರದಿಗಾರರಿಗೆ ತಿಳಿಸಿದರು.
ಮೆಕ್ಕಾ ಮಸೀದಿ ಸ್ಫೋಟ ಸಂಭವಿಸಿ ಮೂರು ತಿಂಗಳಾದ ಬಳಿಕವೂ ದುಷ್ಕರ್ಮಿಗಳನ್ನು ಹಿಡಿಯಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಭದ್ರತಾ ರಂಗದ ವೈಫಲ್ಯದ ಬಗ್ಗೆ ಮುಖ್ಯಮಂತ್ರಿಯ ವಿರುದ್ಧ ಆರೋಪ ಹೊರಿಸಿದ ನಾಯ್ಡು, " ಜನರ ಆಸ್ತಿಪಾಸ್ತಿ ರಕ್ಷಣೆಯಲ್ಲಿ ಮುಖ್ಯಮಂತ್ರಿ ಅಸಮರ್ಥರಾಗಿದ್ದಾರೆ. ಆಡಳಿತದ ಮೇಲೆ ಬಿಗಿ ಹಿಡಿತವನ್ನು ಅವರು ಕಳೆದುಕೊಂಡಿದ್ದಾರೆ. ಭಯೋತ್ಪಾದಕ ಮತ್ತು ಸಮಾಜವಿರೋಧಿ ಶಕ್ತಿಗಳದೇ ಅಟಾಟೋಪವಾಗಿದೆ " ಎಂದು ನಾಯ್ಡು ಟೀಕಿಸಿದರು.
ರಾಜಶೇಖರ ರೆಡ್ಡಿ ಸರ್ಕಾರದ ವೈಫಲ್ಯದ ಬಗ್ಗೆ ಗಮನ ಸೆಳೆಯಲು ಆ.28ರಂದು ಮುಖ್ಯಪ್ರತಿಪಕ್ಷವು ರಾಜ್ಯವ್ಯಾಪಿ ರಾಲಿಗಳನ್ನು ಸಂಘಟಿಸುತ್ತದೆಂದು ಅವರು ಹೇಳಿದರು.
|