ಬ್ಯಾಂಕ್‌ಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರೇಂದ್ರ ನಾಥ್ ಘೋಷ್‌ನನ್ನು ಕಾನೂನು ಕ್ರಮ ಎದುರಿಸುವ ಸಲುವಾಗಿ ಸೋಮವಾರ ಸಿಬಿಐ ತಂಡವೊಂದು ಜರ್ಮನಿಯಿಂದ ಸ್ವದೇಶಕ್ಕೆ ಕರೆತಂದಿತು. ಸ್ವದೇಶಕ್ಕೆ ತನ್ನನ್ನು ಗಡೀಪಾರು ಮಾಡುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಘೋಷ್ ಚಾಕುವೊಂದನ್ನು ನುಂಗಿದ್ದ.
46 ವರ್ಷ ಪ್ರಾಯದ ಘೋಷ್‌ಗೆ 2003ರಲ್ಲೇ ಗಡೀಪಾರು ಆದೇಶ ನೀಡಲಾಗಿತ್ತು. ಐದು ವರ್ಷಗಳ ಕಾನೂನಿನ ಹೋರಾಟದ ಬಳಿಕ ಜರ್ಮನಿ ಅಧಿಕಾರಿಗಳು ಘೋಷ್‌ನ ಗಡೀಪಾರಿನ ವಿಧಿವಿಧಾನಗಳನ್ನು ಪೂರೈಸಿದ ನಂತರ ಮ್ಯೂನಿಚ್‌ನ ವಿಶೇಷ ವಿಮಾನದಲ್ಲಿ ಘೋಷ್‌ನನ್ನು ಕರೆತರಲಾಯಿತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಘೋಷ್‌ನ ಹೊಟ್ಟೆಯಲ್ಲಿ 8 ಸೆಂಮೀ ಉದ್ದದ ಚಾಕು ಇರುವ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಕಾರಣದ ಮೇಲೆ ಘೋಷ್ ಗಡೀಪಾರಿಗೆ ಜರ್ಮನಿ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಘೋಷ್ ಶಸ್ತ್ರಚಿಕಿತ್ಸೆ ಮೂಲಕ ಚಾಕುವನ್ನು ಹೊರತೆಗೆಯಲು ಕೂಡ ಅನುಮತಿ ನೀಡಿರಲಿಲ್ಲ. ಜರ್ಮನಿ ಕಾನೂನಿನ ಪ್ರಕಾರ ರೋಗಿಯ ಅನುಮತಿ ಇಲ್ಲದೇ ಶಸ್ತ್ರಚಿಕಿತ್ಸೆ ನಡೆಸುವಂತಿಲ್ಲ.
ಆರೋಪಿಯನ್ನು ವೈದ್ಯರ ನಿಗಾದಲ್ಲಿ ವಿಶೇಷ ವಿಮಾನದಲ್ಲಿ ಕರೆದೊಯ್ಯುವುದಾಗಿ ಆಶ್ವಾಸನೆ ನೀಡಿದ ಬಳಿಕ ಜರ್ಮನಿ ಅಧಿಕಾರಿಗಳು ಘೋಷ್ ಪ್ರಯಾಣಕ್ಕೆ ಅನುಮತಿ ನೀಡಿದರು. 2001ರಲ್ಲಿ ಅಲಹಾಬಾದ್ ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ರಮಾನಾನಿ ಜತೆ ಷಾಮೀಲಾಗಿ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಅಧಿಕ ಮೌಲ್ಯದ ಬ್ಯಾಂಕರ್ ಚೆಕ್‌ಗಳನ್ನು ಘೋಷ್ ಪಡೆದಿದ್ದನು.
ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಿಗೆ 1992-96ರ ಅವಧಿಯಲ್ಲಿ 35 ಕೋಟಿ ರೂ. ವಂಚಿಸಿದ್ದನೆಂದು ಘೋಷ್ ವಿರುದ್ದ ಆರೋಪ ಹೊರಿಸಲಾಗಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ವಿಭಾಗೀಯ ಮ್ಯಾನೇಜರ್ ನಿಲೋಪಮಾ ದಾಸ್ ಜತೆ ಶಾಮೀಲಾದ ಆರೋಪಿ ನಾಲ್ಕು ಬ್ಯಾಂಕ್ ಖಾತೆಗಳನ್ನು ತೆರೆದು ಚೆಕ್‌ಗಳನ್ನು ನಗದೀಕರಿಸುವ ಮೂಲಕ 10.84ಕೋಟಿ ರೂ. ವಂಚಿಸಿದ್ದ. ಇನ್ನೂ ಮೂರು ಪ್ರಕರಣಗಳಲ್ಲಿ ಘೋಷ್ 16 ಕೋಟಿ ರೂ.ಗಳನ್ನು ವಂಚಿಸಿದ್ದ.
|