40 ಜನರನ್ನು ಬಲಿತೆಗೆದುಕೊಂಡ ಹೈದರಾಬಾದ್ ಸ್ಫೋಟಗಳ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರೆ ತೊಯ್ಬಾ ಅಥವಾ ಜೈಷೆ ಮೊಹಮ್ಮದ್ ಕೈವಾಡವನ್ನು ಭದ್ರತಾ ಪಡೆಗಳು ಶಂಕಿಸಿವೆಯೆಂದು ಸರ್ಕಾರ ಸೋಮವಾರ ತಿಳಿಸಿದೆ.
ಈ ಘಟನೆಯ ಬಗ್ಗೆ ತನಿಖೆ ಆರಂಭಿಕ ಹಂತದಲ್ಲಿದ್ದು, ಕೆಲವು ಮಾಹಿತಿಗಳ ಆಧಾರದ ಮೇಲೆ ಸಾಧ್ಯತೆಗಳನ್ನು ವ್ಯಕ್ತಪಡಿಸಲಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಇಲ್ಲಿ ತಿಳಿಸಿದರು.
ಈ ಶಕ್ತಿಗಳು ರಾಷ್ಟ್ರದ ಹೊರಗಿದ್ದುಕೊಂಡು ಭಯೋತ್ಪಾದನೆ ಚಟುವಟಿಕೆಗಳಿಗೆ ಇಂಬು ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಬಿಎಸ್‌ಎಫ್ ಪರ್ವತಾರೋಹಣ ಉದ್ಘಾಟಿಸಿದ ಬಳಿಕ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.
ಸ್ಫೋಟಕ್ಕೆ ಸಂಚು ನಡೆಸಿದ ಯಾವುದೇ ಗುಂಪನ್ನು ಗುರುತಿಸಲಾಗಿದೆಯೇ ಎಂಬ ಪ್ರಶ್ನೆಗೆ, ತನಿಖೆ ಆರಭಿಕ ಹಂತದಲ್ಲಿದ್ದು, ಲಷ್ಕರೆ ತೊಯ್ಬಾ ಅಥವಾ ಜೈಷೆ ಮೊಹಮದ್ ಕೈವಾಡವನ್ನು ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸರು ಶಂಕಿಸಿದ್ದಾರೆ. ಆದರೆ ಸ್ಫೋಟಗಳನ್ನು ಯೋಜಿಸಿ, ಅನುಷ್ಠಾನಕ್ಕೆ ತಂದ ದುಷ್ಕರ್ಮಿಗಳನ್ನು ಹಿಡಿಯುವುದು ಅತೀ ಮುಖ್ಯ ಎಂದು ಅವರು ಹೇಳಿದರು.
|