1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರಾದ ಬಾಲಿವುಡ್ ಚಿತ್ರನಟ ಸಂಜಯ್ ದತ್ ಸೆ.27ರವರೆಗೆ ಬಂಧಮುಕ್ತರಾಗಿ ಉಳಿಯುವ ಸಂಭವವಿದೆ. ಏಕೆಂದರೆ ತೀರ್ಪಿನ ಪ್ರತಿಗಳನ್ನು ಟಾಡಾ ಕೋರ್ಟ್ ಅಂದೇ ಹಸ್ತಾಂತರಿಸುವುದೆಂದು ನಿರೀಕ್ಷಿಸಲಾಗಿದೆ.
ಅಂತಿಮ ತೀರ್ಪಿನ ಪ್ರತಿಗಳನ್ನು ಒದಗಿಸಿಲ್ಲ ಎಂಬ ಕಾರಣದ ಮೇಲೆ ಸಂಜಯ ದತ್ ಮತ್ತು ಇನ್ನೂ ನಾಲ್ವರು ದೋಷಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಸುಪ್ರೀಂಕೋರ್ಟ್ ಆದೇಶದನ್ವಯ ತೀರ್ಪಿನ ಪ್ರತಿಗಳನ್ನು ಸ್ವೀಕರಿಸಿದ ಕೂಡಲೇ ದತ್ ಹಾಗೂ ಮತ್ತಿತರರು ಶರಣಾಗಬೇಕು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಕಾಯಂ ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಬಹುದು.
ಟಾಡಾ ಕೋರ್ಟ್ ಸೆ.14ರಿಂದ ಎಲ್ಲ ಕೈದಿಗಳಿಗೆ ತೀರ್ಪಿನ ಪ್ರತಿಗಳ ಹಸ್ತಾಂತರವನ್ನು ಆರಂಭಿಸುವ ಸಂಭವವಿದೆ. ಇದಕ್ಕೆ ಮುಂಚೆ ಪ್ರತಿಗಳನ್ನು ಹಸ್ತಾಂತರಿಸುವ ದಿನಾಂಕವನ್ನು ಕೋರ್ಟ್ ಸೋಮವಾರಕ್ಕೆ ನಿಗದಿಮಾಡಿತ್ತು. ಆದರೆ ಆದೇಶವನ್ನು ನವೀಕರಿಸಿ ಸೆ.14ರ ದಿನಾಂಕವನ್ನು ನಿಗದಿಮಾಡಿದೆ.
ಏತನ್ಮಧ್ಯೆ, ತಮ್ಮ ವಕೀಲರಾದ ಸತೀಶ್‌ಮನೆ ಶಿಂಧೆ ಮತ್ತು ಕರಣ್ ಸಿಂಗ್ ಜತೆ ಟಾಡಾ ಕೋರ್ಟ್‌ಗೆ ದತ್ ಹಾಜರಾದರು. "ದೇವರು ದೊಡ್ಡವನು. ನನಗೆ ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸವಿದೆ. ನನ್ನ ಕಷ್ಟ ಕಾಲದಲ್ಲಿ ಹೃದಯಪೂರ್ವಕ ಬೆಂಬಲ ನೀಡಿದ ಮಾಧ್ಯಮಕ್ಕೆ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ದತ್ ಭಾವಪರಶತೆಯಿಂದ ನುಡಿದರು.
|