ನ್ಯಾಯಾಧೀಶರು ತಮಗೆ ಸೇರಿದ ಬಾಕಿಪ್ರಕರಣಗಳ ಇತ್ಯರ್ಥಕ್ಕೆ ಅಸಮರ್ಥರಾಗಿರುವಾಗ ನ್ಯಾಯಾಧೀಶರ ವಿರುದ್ಧ ಸಾರ್ವಜನಿಕರ ದೂರುಗಳನ್ನು ಪರಿಶೀಲಿಸುವ ಕೆಲಸವನ್ನು ನ್ಯಾಯಾಂಗಕ್ಕೆ ನೀಡಿ ಕಡಿವಾಣ ಹಾಕುವುದರಲ್ಲಿ ಅರ್ಥವಿಲ್ಲ ಎಂದು ಹಿರಿಯ ವಕೀಲ ಮತ್ತು ಸಂಸದೀಯಪಟು ರಾಂ ಜೇಠ್ಮಲಾನಿ ಎಚ್ಚರಿಸಿದ್ದಾರೆ.
ಕೋರ್ಟ್‌ಗಳಲ್ಲಿ 32 ದಶಲಕ್ಷ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಂಗ ಹೆಣಗುತ್ತಿರುವ ಸಂದರ್ಭದಲ್ಲಿ ಸರ್ಕಾರ ನ್ಯಾಯಾಧೀಶರ ತನಿಖಾ ಮಸೂದೆಯನ್ನು ಮಂಡಿಸಿದೆ. ಇದರಿಂದ ಯಾರು ಬೇಕಾದರೂ ಅವರ ವಿರುದ್ಧ ದೂರು ನೀಡಲು ಅವಕಾಶ ನೀಡುವ ಮೂಲಕ ಪ್ರಕರಣಗಳ ನೆರೆತೂಬನ್ನು ತೆಗೆದಂತಾಗುತ್ತದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ನ್ಯಾಯ ಮಂಡಳಿಯು ದೂರುಗಳ ಮಹಾಪೂರದ ದೆಸೆಯಿಂದ ತಮ್ಮ ಮಾಮೂಲಿ ನ್ಯಾಯಿಕ ಕೆಲಸಗಳನ್ನು ಬದಿಗೊತ್ತಿ ದೂರುಗಳ ವಿಲೇವಾರಿಗೆ ಪೂರ್ಣ ಸಮಯ ವಿನಿಯೋಗಿಸಬೇಕಾಗುತ್ತದೆ ಎಂದು ಮಸೂದೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಾ ಅವರು ಹೇಳಿದರು.
ಒಂದು ಕಡೆ ನ್ಯಾಯಾಧೀಶರು ಕೋರ್ಟ್‌ಗಳ ಸುಗಮ ಕಾಯನಿರ್ವಹಣೆಗೆ ರಾತ್ರಿಪಾಳಿಯಲ್ಲಿ ದುಡಿಯುವ ಬಗ್ಗೆ ಯೋಚಿಸುತ್ತಿದ್ದರೆ, ಇನ್ನೊಂದು ಕಡೆ ಸಹಿಸಲಾಗದಷ್ಟು ಪ್ರಕರಣಗಳ ಹೊರೆ ಬೀಳುತ್ತಿದೆ ಎಂದು ಜೇಠ್ಮಲಾನಿ ಹೇಳಿದರು.
ಮಸೂದೆಯಲ್ಲಿ ದಂಡನೆಯ ಅಂಶಕ್ಕೆ ಸಮಿತಿಯು ಬೆಂಬಲ ನೀಡಿದೆ. ಆದರೆ ರಾಷ್ಟ್ರೀಯ ನ್ಯಾಯ ಮಂಡಳಿಗೆ ಕೇವಲ ನ್ಯಾಯಾಧೀಶರು ಸದಸ್ಯರಾಗಿರಬೇಕೆಂಬ ಪರಿಕಲ್ಪನೆಯನ್ನು ನಿರಾಕರಿಸಿದೆ. ವಕೀಲರು ಮತ್ತು ಸರ್ಕಾರವನ್ನು ಒಳಪಡಿಸುವ ಮೂಲಕ ಮಂಡಳಿಯ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಅವರು ಹೇಳಿದರು.
|