ಲಡಕ್‌ನ ಹಿಮಚ್ಛಾದಿತ ಪ್ರದೇಶಗಳಲ್ಲಿ ಯುರೇನಿಯಂ ನಿಕ್ಷೇಪವನ್ನು ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಅದರ ವಾಣಿಜ್ಯ ಪ್ರಾಮುಖ್ಯತೆ ಬಗ್ಗೆ ಅಣುಶಕ್ತಿ ಇಲಾಖೆ ಎಚ್ಚರಿಕೆಯ ನಿಲುವನ್ನು ಅಳವಡಿಸಿಕೊಂಡಿದೆ.
ಉತ್ತರ ಲಡಖ್‌ನ ನುಬ್ರಾ-ಶ್ಯೋಕ್ ಕಣಿವೆಯ ಬೆಟ್ಟಪ್ರದೇಶದಲ್ಲಿರುವ ಸಣ್ಣ ಗ್ರಾಮ ಉಡ್ಮಾರುನಲ್ಲಿ ಯುರೇನಿಯಂ ಮತ್ತು ಥೋರಿಯಂನ ವಿಪುಲ ಪ್ರಮಾಣವನ್ನು ಕಾಮೌನ್ ವಿ.ವಿ.ಯ ಭೂಗೋಳಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.
ದಟ್ಟವಾದ ಗ್ರಾನೈಟ್ ಹಳ್ಳವನ್ನು ಶೋಧಿಸಿದಾಗ ವಿಫುಲ ಸಣ್ಣ, ಮಧ್ಯಮ ಗಾತ್ರದ ಯುಹೆಡ್ರಲ್ ಹರಳು, ಹಸಿರು ಬಣ್ಣದ ಜಿರ್ಕೊನ್ ಪತ್ತೆಯಾಗಿವೆ ಎಂದು ಭೂಗೋಳಶಾಸ್ತ್ರಜ್ಞ ರಾಜೀವ್ ಉಪಾಧ್ಯಾಯ ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ಬರೆದಿದ್ದಾರೆ. ಜಿರ್ಕೋನ್ ಹರಳುಗಳನ್ನು ಭೂರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಅಧಿಕ ಪ್ರಮಾಣದ ಯುರೇನಿಯಂ ಮತ್ತು ಥೋರಿಯಂ ಅಂಶಗಳು ಕಂಡುಬಂದಿದೆ ಎಂದವರು ಹೇಳಿದ್ದಾರೆ.
ಏತನ್ಮಧ್ಯೆ, "ಮುಖ್ಯ ಅದಿರಿನಿಂದ ಬೇರ್ಪಡಿಸಿದ ಸಣ್ಣ ಪ್ರಮಾಣದ ಜಿರ್ಕಾನ್ ಮಾದರಿಯಿಂದ ಯುರೇನಿಯಂ ಪತ್ತೆಯಾಗಿದೆ. ನಾವು ದೊಡ್ಡ ಪ್ರಮಾಣದಲ್ಲಿ ಅದಿರನ್ನು ಶೋಧಿಸುವ ಮೂಲಕ ಸರಾಸರಿ ಯುರೇನಿಯಂ ಪ್ರಮಾಣವನ್ನು ಪತ್ತೆಹಚ್ಚಬೇಕಿದೆ.
ಇಂತಹ ಅಂದಾಜುಗಳ ಬಳಿಕವೇ ಯುರೇನಿಯಂ ನಿಕ್ಷೇಪ ವಾಣಿಜ್ಯ ಹಿತಾಸಕ್ತಿಗೆ ಪೂರಕವಾಗಿರುವ ಬಗ್ಗೆ ನಿರ್ಧರಿಸಬಹುದು" ಎಂದು ಎಂದು ಅಣುಶಕ್ತಿ ಇಲಾಖೆಯ ಸಾರ್ವಜನಿಕ ಜಾಗೃತಿ ವಿಭಾಗದ ಮುಖ್ಯಸ್ಥ ಎಸ್. ಕೆ. ಮಲ್ಹೋತ್ರಾ ಹೇಳಿದ್ದಾರೆ.
|