ಯದ್ವಾತದ್ವಾ ಚಲಿಸಿದ ಟ್ರಕ್ಕೊಂದು ನಾಲ್ಕು ಮಂದಿಯನ್ನು ಬಲಿತೆಗೆದುಕೊಂಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು 20ಕ್ಕೂ ಹೆಚ್ಚು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದು, ನಾಯ್ ಕೀ ಮಂಡಿ ಮತ್ತು ಮಂಟೋಲಾ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಪ್ರತಿಭಟನೆಯು ಆಗ್ರಾದ ವಿವಿಧ ಪ್ರದೇಶಗಳಿಗೂ ಹಬ್ಬಿದ್ದು, ಉದ್ವಿಗ್ನತೆ ತಲೆದೋರಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದರಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
ಬುಧವಾರ ಬೆಳಿಗ್ಗೆ ಆಗ್ರಾದ ಎಂಜಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಯುವಕರು ಸಾವನ್ನಪ್ಪಿದ್ದರು.ಇದರ ವಿರುದ್ಧ ರೊಚ್ಚಿಗೆದ್ದ ಜನರು ಪ್ರತಿಭಟನೆಗೆ ಮುಂದಾಗಿದ್ದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಸುಮಾರು 20 ಲಾರಿಗಳಿಗೆ ಬೆಂಕಿ ಹಚ್ಚಿದ್ದಾರೆ.
ಅಲ್ಲದೇ ಇದರಲ್ಲಿ ಪೊಲೀಸರ ವಾಹನಗಳು ಸೇರಿವೆ. ನಗರದ ವಿವಿಧೆಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಘರ್ಷಣೆಯಲ್ಲಿ ಸಹಾಯಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಗಾಯಗೊಂಡಿದ್ದು,ಕೆಲವು ಪೊಲೀಸ್‌ನವರೂ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ಹಿಂಸಾಚಾರದತ್ತ ತಿರುಗುತ್ತಿದ್ದಂತೆ ಇಲ್ಲಿನ ಮೀರತ್,ಇಟಾವಾ ಮತ್ತು ಹತ್ರಾಸ್‌ಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ಕು ಮಂದಿ ಯುವಕರು ಮುಸ್ಲಿಮರಾಗಿದ್ದು, ಅವರೆಲ್ಲ ಶಬೇ ಬರಾತ್ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಇದರಿಂದಾಗಿ ಘರ್ಷಣೆ ಎಲ್ಲೆಡೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನೆಡೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ, ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಸಾರಲಾಗಿದೆ ಎಂದು ಹೇಳಿದರು.
|