ಪ್ರಸಕ್ತ ಅಣು ಶಕ್ತಿ ಕಾಯ್ದೆಯಡಿ ಅಣು ಶಕ್ತಿ ಉತ್ಪಾದನೆಯಲ್ಲಿ ಖಾಸಗಿ ಕ್ಷೇತ್ರ ಭಾಗವಹಿಸುವಂತಿಲ್ಲ ಎಂದು ಸರ್ಕಾರ ಬುಧವಾರ ತಿಳಿಸಿದೆ. ಅಣು ಶಕ್ತಿ ಉತ್ಪಾದನೆಯನ್ನು ಕೇಂದ್ರ ಸರ್ಕಾರದ ಕಂಪನಿ ಕೈಗೊಳ್ಳಲು ಮಾತ್ರ 1962ರ ಅಣು ಶಕ್ತಿ ಕಾಯ್ದೆಯು ಅವಕಾಶ ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಕಚೇರಿಯ ರಾಜ್ಯಸಚಿವ ಪ್ರಥ್ವಿರಾಜ್ ಚವಾಣ್ ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆಗೆ ತಿಳಿಸಿದರು.
ಉಪಕರಣ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಸಂಬಂಧಿಸಿದಂತೆ ಯಾವುದೇ ನೀತಿ ಬದಲಾವಣೆ ಅಗತ್ಯವಿಲ್ಲ ಎಂದು ಹೇಳಿದರು. ವಾಸ್ತವವಾಗಿ ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಜತೆ ಸರ್ಕಾರ ಕೆಲಸ ಮಾಡಿದೆ. ಆದರೆ ಅಣು ಶಕ್ತಿ ಉತ್ಪಾದನೆಯಲ್ಲಿ ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆಗೆ ಸಂಬಂಧಪಟ್ಟಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಪ್ರಸಕ್ತ ಕಾಯ್ದೆಯ ಪುನರ್ಪರಿಶೀಲನೆಗೆ ವಿಜ್ಞಾನಿ ರಾಜಾ ರಾಮಣ್ಣ ನೇತೃತ್ವದಲ್ಲಿ 1997ರಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು ಮತ್ತು 1998ರಲ್ಲಿ ಅವರು ವರದಿ ನೀಡಿದರೆಂದು ಸಚಿವರು ತಿಳಿಸಿದರು.
ಸಮಿತಿಯ ಶಿಫಾರಸುಗಳ ಬಗ್ಗೆ ಕೇಳಿದಾಗ ಇದು ರಾಷ್ಟ್ರೀಯ ಭದ್ರತೆ ಮತ್ತು ಪರಮಾಣು ಶಕ್ತಿ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದರು.
|