ಕಳೆದ ಮೂರು ವರ್ಷಗಳಿಂದ ಪದವಿ ಪ್ರಮಾಣಪತ್ರಗಳ ವಿತರಣೆಗೆ ವಿಳಂಬವಾಗುತ್ತಿರುವುದರ ವಿರುದ್ಧ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಎಐಐಎಂಎಸ್) ಸ್ಥಾನಿಕ ವೈದ್ಯರು ತಮ್ಮ ಮುಷ್ಕರವನ್ನು ಮುಂದುವರಿಸಲು ಬುಧವಾರ ರಾತ್ರಿ ನಿರ್ಧರಿಸಿದರು.
ಪದವಿಗಳಿಗೆ ಸಹ ಹಾಕಲು ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ಅವರಿಗೆ ರಾತ್ರಿ 10ಗಂಟೆವರೆಗೆ ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸುವ ನಿರ್ಧಾರವನ್ನು ತುರ್ತುಸಭೆಯಲ್ಲಿ ಕೈಗೊಳ್ಳಲಾಯಿತು.
"ಗಡುವು ಅಂತ್ಯಗೊಂಡಿದ್ದರೂ, ಸಚಿವರು ಇನ್ನೂ ಸಹಿ ಹಾಕಿಲ್ಲ. ಅವರ ಧೋರಣೆಯೂ ಕಠಿಣವಾಗಿದೆ. ಮುಷ್ಕರಕ್ಕೆ ಕರೆ ನೀಡಿದ ಬಳಿಕವೂ ಗುರುವಾರ ಬೆಳಿಗ್ಗೆ ದೆಹಲಿಯ ಹೊರಗೆ ಹೊರಟಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾವು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದೇವೆ" ಎಂದು ವೈದ್ಯರ ಒಕ್ಕೂಟದ ವಕ್ತಾರ ಕುಮಾರ್ ಹರ್ಷ್ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ರಾಮದಾಸ್ ಸುಮಾರು 400 ಎಐಐಎಂಎಸ್ ವೈದ್ಯರ ಡಿಗ್ರಿಗಳಿಗೆ ಸಹಿ ಹಾಕಬೇಕೆಂದು ಒತ್ತಾಯಿಸಿ ಸ್ಥಾನಿಕ ವೈದ್ಯರು ಮುಷ್ಕರಕ್ಕೆ ಇಳಿದಿದ್ದಾರೆ. ಸೆ.25ರೊಳಗೆ ಡಿಗ್ರಿ ಹಸ್ತಾಂತರಿಸುವ ಸಚಿವರ ಪ್ರಸ್ತಾಪವನ್ನು ವೈದ್ಯರು ನಿರಾಕರಿಸಿದ್ದಾರೆ.
ಸೆ.1ರಂದು ಉನ್ನತ ಶಿಕ್ಷಣದ ಸಲುವಾಗಿ ವಿದೇಶಕ್ಕೆ ತೆರಳಲಿರುವ ಕನಿಷ್ಠ 50 ವೈದ್ಯರ ಡಿಗ್ರಿಗಳಿಗೆ ಸಹಿ ಹಾಕುವಂತೆ ರಾತ್ರಿ 10ರ ಗಡುವನ್ನು ಅವರು ನೀಡಿದ್ದರು.
|