ಬಿಹಾರ ಸರ್ಕಾರವು ಯೂನಿಸೆಫ್‌ನ ಜಂಟಿ ಸಹಯೋಗದಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವ ಮಹಿಳೆಯರ ವೈದ್ಯಕೀಯ ಆರೈಕೆಗಾಗಿ ಪ್ರಸೂತಿ ಕುಟೀರಗಳನ್ನು ಸ್ಥಾಪಿಸುವ ನೂತನ ಯೋಜನೆಯನ್ನು ಹಮ್ಮಿಕೊಂಡಿದೆ . ಸಮಸ್ಟಿಪುರ ಜಿಲ್ಲೆಯ ಬಾರ್ಗಾಮಾ ಗಾಚಿ ಗ್ರಾಮದ ಇಂತಹ ಒಂದು ಕುಟೀರಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಭೇಟಿ ನೀಡಿದರು.ಪ್ರವಾಹಪೀಡಿತ ಮಹಿಳೆಯರಿಗೆ ಇಂತಹ ಆರೋಗ್ಯ ಸೇವೆ ಒದಗಿಸಿದ ಆರೋಗ್ಯ ಇಲಾಖೆ ಮತ್ತು ಯೂನಿಸೆಫ್‌ನ ಜಂಟಿ ಪ್ರಯತ್ನವನ್ನು ಅವರು ಶ್ಲಾಘಿಸಿದರು.
2 ದಿನಗಳ ಮುಂಚೆ ಇಲ್ಲಿ ಸ್ಥಾಪಿಸಲಾದ ಪ್ರಸೂತಿ ಕುಟೀರ 21 ಮಹಿಳೆಯರಿಗೆ ಪ್ರಸವಪೂರ್ವ ಆರೈಕೆ ನೀಡಿದೆ. ನಾಲ್ವರು ದಾದಿಯರು, ನಾಲ್ವರು ಅರೆವೈದ್ಯಕೀಯ ಸಿಬ್ಬಂದಿ ಮತ್ತು ಮೂವರು ವೈದ್ಯರು ಸರದಿ ಪ್ರಕಾರ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಜೆನರೇಟರ್ ಮೂಲಕ ವಿದ್ಯುಚ್ಛಕ್ತಿ ಸೌಲಭ್ಯ ಕಲ್ಪಿಸಲಾಗಿದೆ. ಸುರಕ್ಷಿತ ಪ್ರಸವಕ್ಕಾಗಿ ಹಾಸಿಗೆಗಳು, ಪ್ರಸೂತಿ ಕಿಟ್‌ಗಳು,ಸ್ಯಾನಿಟರಿ ಷೀಟ್‌ಗಳು, ಕರವಸ್ತ್ರ ಮತ್ತು ಔಷಧಿಗಳು ಇಲ್ಲಿ ಲಭ್ಯವಿವೆ.
"ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಹೆಚ್ಚು. ಮಹಿಳೆ ಗರ್ಭಿಣಿಯಾಗಿದ್ದರೆ ಅಥವಾ ಪ್ರಸವದ ನಿರೀಕ್ಷೆಯಲ್ಲಿದ್ದರೆ ಪ್ರಸವಪೂರ್ವ ಸೇವೆಗಳ ಕೊರತೆಯಿಂದ ತೊಂದರೆ ನೂರ್ಮಡಿಸುತ್ತದೆ.ಸ್ವಚ್ಛ ಪರಿಸರದಲ್ಲಿ ನುರಿತ ದಾದಿಯರ ಸೇವೆಯಿಂದ ಸುಖ ಪ್ರಸವ ಸಾಧ್ಯ" ಎಂದು ಯೂನಿಸೆಫ್‌ನ ರಾಜ್ಯ ಪ್ರತಿನಿಧಿ ವಿಜಯ್ ರಾಜ್‌ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
|