ಗಿರ್ ಅರಣ್ಯದಲ್ಲಿ ಏಶ್ಯದ ಅನೇಕ ಸಿಂಹಗಳನ್ನು ಬೇಟೆಯಾಡಿ ಕೊಂದ ಇಬ್ಬರನ್ನು ಮಧ್ಯಪ್ರದೇಶದಲ್ಲಿ ಬಂಧಿಸುವುದರೊಂದಿಗೆ ತನಿಖೆದಾರರ ಬಲ ವೃದ್ಧಿಸಿದೆ. ಇವರಿಬ್ಬರು ಪಾನ್- ನ್ಯಾಷನಲ್ ಕಳ್ಳಬೇಟೆಯ ಕೂಟಕ್ಕೆ ಸೇರಿದವರೆಂದು ಹೇಳಲಾಗಿದೆ.
ಈ ಪ್ರಕರಣದ ಹೊಣೆ ಹೊತ್ತಿರುವ ಗುಜರಾತ್ ಸಿಐಡಿ ತಂಡ ಐದು ರಾಜ್ಯಗಳನ್ನು ಜಾಲಾಡಿದರು. ಆದರೆ ಸತ್ತ ಸಿಂಹಗಳ ಎಲುಬು, ಉಗುರುಅಥವಾ ತೊಗಲನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ. ಅವುಗಳನ್ನು ರಾಷ್ಟ್ರದ ಹೊರಗೆ ಕಳ್ಳಸಾಗಣೆ ಮಾಡಲಾಗಿದೆಯೆಂದು ಅವರು ಶಂಕಿಸಿದ್ದಾರೆ.
ಸಂರಕ್ಷಿತ ಪ್ರಾಣಿಗಳನ್ನು ಕಳ್ಳಬೇಟೆಯಾಡುವ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಕೆಲವು ಶಂಕಿತರ ಜಾಡು ಹಿಡಿದು ಹೊರಟಿದ್ದಾಗ ಮಧ್ಯಪ್ರದೇಶ ಪೊಲೀಸರ ನೆರವಿನಿಂದ ಕಾಂಡ್ವಾ ಜಿಲ್ಲೆಯಲ್ಲಿ ಇಬ್ಬರನ್ನು ಬಂಧಿಸಲಾಯಿತು ಎಂದು ತಂಡದ ಹಿರಿಯ ಅಧಿಕಾರಿ ಹೇಳಿದರು.
ಸಿಂಹಗಳ ಸುರಕ್ಷಿತ ತಾಣವಾಗಿದ್ದ ಜುನಾಗಢ್ ಜಿಲ್ಲೆಯ ಗಿರ್ ಅರಣ್ಯದಲ್ಲಿ ಕಳೆದ ಮಾರ್ಚ್ -ಏಪ್ರಿಲ್‌ನಲ್ಲಿ 8 ಸಿಂಹಗಳನ್ನು ಬೇಟೆಯಾಡಿ ಕೊಂದು ಅವುಗಳ ಅಂಗಾಂಗಗಳನ್ನು ಕದಿಯಲಾಗಿತ್ತು. ತನಿಖೆಯಿಂದ ಕರ್ನಾಟಕದ ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದ ತಂಡವೊಂದರ ಜಾಡು ಹಿಡಿಯಲು ಪೊಲೀಸರಿಗೆ ಸಾಧ್ಯವಾಯಿತು.
ಪ್ಯಾನ್ ನ್ಯಾಷನಲ್ ಬೇಟೆ ಕೂಟದ ಪ್ರಮುಖ ಭಾಗವನ್ನು ಭೇದಿಸಲಾಗಿದ್ದು, ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ 17 ಪುರುಷರು ಮತ್ತು 13 ಮಂದಿ ಮಹಿಳೆಯರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಗಿರ್‌ನಲ್ಲಿ ಬುಡಕಟ್ಟು ಜನರ ಜತೆಯಿದ್ದ 50ಕ್ಕೂ ಹೆಚ್ಚು ಮಕ್ಕಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಗಿರ್‌ನಲ್ಲಿ ಕಾರ್ಯಾಚರಿಸುತ್ತಿದ್ದ ತಂಡದ ಕಾರ್ಯವಿಧಾನವು ಕರ್ನಾಟಕದಲ್ಲಿ ಬೇಟೆಯಾಡುವ ಹಕ್ಕಿಪಿಕ್ಕಿ ಜನಾಂಗದ ರೀತಿಯಲ್ಲಿಯೇ ಇತ್ತು ಎಂದು ಕರ್ನಾಟಕ ಪೊಲೀಸರ ಜತೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ಅಧಿಕಾರಿ ತಿಳಿಸಿದರು.
|