ಫ್ಯಾಷನ್ ರಾಂಪ್‌ನಲ್ಲಿ ಹಿಂದೊಮ್ಮೆ ಅವಳು ದೊಡ್ಡ ರೂಪದರ್ಶಿ. ಆದರೆ ಈಗ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ.
ಹಿಂದೊಮ್ಮೆ ಶ್ರೀಮಂತಿಕೆಯಿಂದ ಮೆರೆದವಳು ಈಗ ಬೀದಿಪಾಲಾದ ಗೀತಾಂಜಲಿ ನಾಗಪಾಲ್‌ಳ ರೋಚಕ ಕಥೆಯಿದು.ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಮಕಾಲೀನಳಾದ ಮಾಜಿ ರೂಪದರ್ಶಿ ಗೀತಾಂಜಲಿ ಮಾದಕವಸ್ತು ಚಟಕ್ಕೆ ಬಲಿಯಾಗಿ ಈಗ ಫುಟ್‌ಪಾತ್‌ವಾಸಿಯಾಗಿದ್ದಾಳೆ.
ಕೆದರಿದ ತಲೆಕೂದಲು, ಮಾಸಿದ ಬಟ್ಟೆಯುಳ್ಳ ಅವಳ ನೋಟ ಕಡು ಬಡತನದ ಚಿತ್ರವನ್ನು ಬಿಂಬಿಸುತ್ತಿತ್ತು.ತನ್ನ ಕುಟುಂಬದಿಂದ ತ್ಯಜಿಸಲ್ಪಟ್ಟ 32 ವರ್ಷ ಪ್ರಾಯದ ನಾಗ್‌ಪಾಲ್ ದಕ್ಷಿಣ ದೆಹಲಿಯ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ ದೃಶ್ಯವನ್ನು ಪತ್ರಿಕಾಛಾಯಾಗ್ರಾಹಕನೊಬ್ಬ ಗಮನಿಸಿದ.
ಬಳಿಕ ಆಕೆಯನ್ನು ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಸುಪರ್ದಿಗೆ ಒಪ್ಪಿಸಲಾಯಿತು. ಆಕೆ ಮತಿಭ್ರಮಣೆಗೆ ಒಳಗಾಗಿದ್ದು, ಚಿಕಿತ್ಸೆಯ ಅಗತ್ಯವಿದೆ ಎಂದು ವಿಮಾನ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ನಾಗಪಾಲ್ ಪ್ರಕರಣ ನಿಭಾಯಿಸುವುದು ಹೇಗೆಂದು ಅಧಿಕಾರಗಳಿಗೆ ಸ್ವಲ್ಪ ಕಾಲ ಗೊಂದಲ ಉಂಟಾಯಿತು.
ಆಸ್ಪತ್ರೆಯ ಹೊರಗೆ ಕೂಡ ನಾಗಪಾಲ್ ಕಾರಿನಿಂದ ಇಳಿದು ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದಳು. ಮಾಧ್ಯಮದ ತೀಕ್ಷ್ಣ ಗಮನದಿಂದ ರೋಸಿಹೋದ ಆಕೆ ಸುದ್ದಿಗಾರರ ವಿರುದ್ದ ಸಿಡಿಮಿಡಿಗುಟ್ಟಿದಳು ಮತ್ತು ತನ್ನ ಛಾಯಾಚಿತ್ರ ತೆಗೆಯದಂತೆ ಛಾಯಾಗ್ರಾಹಕರಿಗೆ ಕಿರುಚಿದಳು.
|