1997ರಲ್ಲಿ ಸಂಭವಿಸಿದ ಉಪಾಹಾರ್ ಸಿನೆಮಾ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಬುಧವಾರ ತನ್ನ ತೀರ್ಪನ್ನು ಮುಂದೂಡಿತು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮಮತಾ ಸೆಹಗಾಲ್ ಉಭಯ ಕಡೆಗಳ ವಕೀಲರಿಂದ ಕೆಲವು ಸ್ಪಷ್ಟನೆಗಳನ್ನು ಸ್ವೀಕರಿಸಿದ ಬಳಿಕ ತೀರ್ಪನ್ನು ಕಾದಿರಿಸಿದರು. ಅಂತಿಮ ತೀರ್ಪೀನ ದಿನಾಂಕವನ್ನು ಅ.22ರಂದು ಪ್ರಕಟಿಸಲಾಗುವುದೆಂದು ಕೋರ್ಟ್ ತಿಳಿಸಿತು.
ಉಪಾಹಾರ್ ಸಿನೆಮಾ ಮಾಲೀಕರಾದ ಗೋಪಾಲ್ ಮತ್ತು ಸುಶೀಲ್ ಅನ್ಸಾಲ್ ಈ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಸಂತ್ರಸ್ತರ ಸಂಘ ಎಫ್‌ಐಆರ್ ದಾಖಲು ಮಾಡಿದೆ.ಸಿನೆಮಾದ ವ್ಯವಸ್ಥಾಪನೆಯಲ್ಲಿ ಆರೋಪಿಗಳು ನೇರ ಮತ್ತು ಕ್ರಿಮಿನಲ್ ನಿರ್ಲಕ್ಷ್ಯ ತೋರಿದ್ದಾರೆಂದು ಸಿಬಿಐ ಆಪಾದಿಸಿದೆ.
ಸಿನೆಮಾ ಹಾಲ್ ಮಾಲೀಕರು ದಂಡನಾ ಕ್ರಮಕ್ಕೆ ಅರ್ಪರು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದರು. 10 ವರ್ಷಗಳ ವಿಚಾರಣೆಯಲ್ಲಿ ಸಿಬಿಐ 155 ಸಾಕ್ಷಿಗಳನ್ನು ತನಿಖೆಮಾಡಿತು. ಅವರಲ್ಲಿ ಅನ್ಸಾಲ್ ಬಂಧುಗಳು ಎಂದು ಹೇಳಲಾದ 8 ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಅನ್ಸಾಲರಲ್ಲದೇ ಇನ್ನೂ 14 ಮಂದಿ ಆರೋಪಿಗಳು ಇದ್ದಾರೆ. ನಾಲ್ವರು ಆರೋಪಿಗಳು ವಿಚಾರಣೆಯ ವೇಳೆ ಮೃತಪಟ್ಟಿದ್ದಾರೆ. ಸಿಬಿಐ 1997 ನವೆಂಬರ್ 15ರಂದು ಆರೋಪಪಟ್ಟಿ ಸಲ್ಲಿಸಿತ್ತು. ಕೋರ್ಟ್ ಅದನ್ನು 1998ರ ಜ.19ರಂದು ಅಂಗೀಕರಿಸಿತ್ತು.
1997, ಜೂನ್ 13ರಂದು ಸಂಭವಿಸಿದ ಉಪಾಹಾರ್ ಸಿನೆಮಾ ಅಗ್ನಿದುರಂತದ ಬಳಿಕದ ಕಾಲ್ತುಳಿತದಲ್ಲಿ 59 ಜನರು ಸತ್ತಿದ್ದರು ಮತ್ತು 109 ಜನರು ಗಾಯಗೊಂಡಿದ್ದರು. ಕಟ್ಟಡದ ನೆಲಮಾಳಿಗೆಯಲ್ಲಿದ್ದ ತೀವ್ರಬಿಸಿಯಾದ ಜನರೇಟರ್ ಸ್ಫೋಟಿಸಿ ಸಿನೆಮಾ ಹಾಲ್‌ಗೆ ಬೆಂಕಿಹತ್ತಿಕೊಂಡಿತ್ತು.
|