ಬಂಗಾಳಕೊಲ್ಲಿಯಲ್ಲಿ ಅಮೆರಿಕ ಒಳಗೊಂಡಿರುವ ನೌಕಾಭ್ಯಾಸವನ್ನು ವಿರೋಧಿಸಿ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಬುಧವಾರ ಬೀದಿಗಿಳಿದರು.
ಅಮರಿಕದ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವ ಪಣ ತೊಟ್ಟ ಅವರು, ಚೆನ್ನೈನಿಂದ ವಿಶಾಖಪಟ್ಟಣಂವರೆಗೆ ಜಾಥಾದ ನೇತೃತ್ವ ವಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಚಿದಂಬರಮ್ ಪಿಳ್ಳೈ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಜಾಥಾಗೆ ಚಾಲನೆ ನೀಡಿದರು.
ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವದೇಶಿ ನೌಕಾ ಕಂಪನಿಯನ್ನು ಸ್ಥಾಪಿಸಿದ ಪಿಳ್ಳೈ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ದಿವಂಗತ ನಾಯಕ ಪಿಳ್ಳೈ ರೀತಿಯಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಡಲು ಪ್ರತಿಜ್ಞೆ ಕೈಗೊಳ್ಳೋಣ ಎಂದು ಕಾರಟ್ ಹೇಳಿದರು.ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಪಿಳ್ಳೈ ಹೋರಾಟ ಮಾಡಿದಾಗ ಇದ್ದ ಪರಿಸ್ಥಿತಿ ಈಗಲೂ ಇದೆ.
ಅಮೆರಿಕದ ಸಾಮಾಜ್ರ್ಯಶಾಹಿ ನೀತಿಗೆ ಭಾರತ ಮಿತ್ರತ್ವ ವಹಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. ಭಾರತದ ಸಾರ್ವಬೌಮತ್ವವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕೆಂದು ರಾಜಾ ಹೇಳಿದರು.
ಜಾಥಾ ಸೆ.8ರಂದು ವಿಶಾಖಪಟ್ಟಣಂನಲ್ಲಿ ಅಂತ್ಯಗೊಳ್ಳಲಿದೆ. ಸಿಪಿಐ ಪ್ರಧಾನಕಾರ್ಯದರ್ಶಿ ಬರ್ಧನ್ ನೇತೃತ್ವದ ಜಾಥಾ, ಕಲ್ಕತ್ತದಿಂದ ಹೊರಟಿದ್ದು, ಅದೇ ದಿನ ವಿಶಾಖಪಟ್ಟಣಂ ಮುಟ್ಟಲಿದೆ.
|