ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ: ಲೋಕಸಭೆಯಲ್ಲಿ ಸೋಮವಾರ ಚರ್ಚೆ
ಕಲಾಪ ಅಡ್ಡಿಗೆ ಚೆನ್ನೈಯ 'ರಿಮೋಟ್ ಕಂಟ್ರೋಲ್' ಕಾರಣ: ಸರಕಾರ
ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದ ವಿಷಯದಲ್ಲಿ ಸಂಸದೀಯ ಕಾರ್ಯಕಲಾಪಕ್ಕೆ "ಚೆನ್ನೈಯಿಂದ ಬಂದ ನಿರ್ದಿಷ್ಟ ಸೂಚನೆಯ ಅನುಸಾರ" ಅಡ್ಡಿ ಮಾಡುತ್ತಿರುವ ಎನ್‍‌ಡಿಎ ಮತ್ತು ಯುಎನ್‌ಪಿಎಗಳ "ಹತಾಶ ಮತ್ತು ಆಕ್ರಮಣಕಾರಿ ಧೋರಣೆ" ವಿರುದ್ಧ ಕಿಡಿ ಕಾರಿರುವ ಕೇಂದ್ರ ಸರಕಾರ, ಈ 123 ಒಪ್ಪಂದದ ಕುರಿತು ಸೋಮವಾರ ಲೋಕಸಭೆಯಲ್ಲಿ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದೆ.

ಪ್ರತಿಪಕ್ಷಗಳು ಆಗ್ರಹಿಸುತ್ತಿರುವಂತೆ, ಜಂಟಿ ಸಂಸದೀಯ ಸಮಿತಿ ರಚನೆ ಇಲ್ಲ ಎಂದು ಪುನಃ ಸ್ಪಷ್ಟಪಡಿಸಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಿಯ ರಂಜನ್ ದಾಸಮುನ್ಷಿ ಅವರು, ಪ್ರತಿಪಕ್ಷ ಬಯಸಿದರೆ, ಒಪ್ಪಂದದ ಕೆಲವು ಅನುಬಂಧಗಳ ಕುರಿತು ನಿರ್ದಿಷ್ಟ ಶಂಕೆಗಳನ್ನು ನಿವಾರಿಸಲು ಸರಕಾರವು ಸಮಿತಿಯೊಂದನ್ನು ರಚಿಸಲು ಸಿದ್ಧವಿದೆ ಎಂದು ತಿಳಿಸಿದರು. ಎಡಪಕ್ಷಗಳ ಆಗ್ರಹಕ್ಕೆ ಮಣಿದು ಸರಕಾರವು ಯುಪಿಎ-ಎಡಪಕ್ಷಗಳನ್ನೊಳಗೊಂಡ 15 ಸದಸ್ಯರ ಸಮಿತಿಯೊಂದನ್ನು ಇದೇ ರೀತಿಯಾಗಿ ರಚಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಈ ಬಗ್ಗೆ ಈಗಾಗಲೇ ಲೋಕಸಭೆಯ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಜಸ್ವಂತ್ ಸಿಂಗ್ ಅವರಿಗೆ ತಿಳಿಸಲಾಗಿದೆ. ಈ ವಿಷಯದಲ್ಲಿ ಅವರು ಎನ್‌ಡಿಎ ಜತೆಗೆ ಚರ್ಚಿಸಿ ನಿರ್ಧಾರ ತಿಳಿಸಲಿದ್ದಾರೆ. ಆದರೆ, ತಮ್ಮ ನಿಲುವಿನ ಬಗ್ಗೆ ಇನ್ನೂ ಸರಕಾರಕ್ಕೆ ಅವರು ತಿಳಿಸಬೇಕಷ್ಟೆ ಎಂದು ದಾಸಮುನ್ಷಿ ಹೇಳಿದರು.

ಪರಮಾಣು ಒಪ್ಪಂದದ ಕುರಿತು ಚರ್ಚೆಗೆ ಮೇಲ್ಮನೆಯಲ್ಲಿ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಲೋಕಸಭೆಯಸಲ್ಲಿ ಸಾಚಾರ್ ಸಮಿತಿ ವರದಿಯ ಚರ್ಚೆಯಾಗುವುದನ್ನು ತಡೆಯುವುದಕ್ಕಾಗಿಯೇ ಬಿಜೆಪಿಯು ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಹೇಳಿದರು.

ಚೆನ್ನೈಯಿಂದ ಬಂದಿರುವ ನಿರ್ದಿಷ್ಟ ಸೂಚನೆಗಳ ಅನುಸಾರವೇ ಎನ್‌ಡಿಎಯು ಕಲಾಪಕ್ಕೆ ಅಡ್ಡಿ ಮಾಡುತ್ತಿದೆ ಎಂಬ ಬಗ್ಗೆ ತಮಗೆ ಬಿಜೆಪಿಯ "ಪ್ರಭಾವೀ ಮೂಲಗಳಿಂದ" ಮಾಹಿತಿ ದೊರೆತಿದೆ ಎಂದು ಎಐಡಿಎಂಕೆ ನಾಯಕಿ ಜಯಲಲಿತಾ ಅವರ ಹೆಸರು ಹೇಳದೆ ನುಡಿದ ಅವರು, ಭವಿಷ್ಯದಲ್ಲಿ ಆ ವ್ಯಕ್ತಿಯಿಂದ ಲಾಭ ಪಡೆಯುವ ನಿಟ್ಟಿನಲ್ಲಿ ಬಿಜೆಪಿಯು ಆ 'ರಿಮೋಟ್ ಕಂಟ್ರೋಲ್' ಸಲಹೆಯಂತೆ ನಡೆದುಕೊಳ್ಳುತ್ತಿದೆ ಎಂದು ಆಪಾದಿಸಿದರು.
ಮತ್ತಷ್ಟು
ದಾವೂದ್ ಸಹಚರ ಅಟ್ಟರ್‌ವಾಲಾ ಗಡೀಪಾರು
ಪೆರೀರಾಗೆ 3 ವರ್ಷ ಕಠಿಣ ಶಿಕ್ಷೆ
ವರದಕ್ಷಿಣೆ ಹತ್ಯೆ:ಅಳಿಯನ ವಿರುದ್ಧ ದೂರು
ಸೆಪ್ಟೆಂಬರ್ 9ರ ಬಳಿಕ ಸಮಿತಿ ಸಭೆ
ಮದರ್ ತೆರೇಸಾ ಪುಣ್ಯತಿಥಿ: ಗೌರವಾರ್ಪಣೆ
ಶಿಕ್ಷಕರ ದಿನಾಚರಣೆ:ಸಂಸತ್ ನಮನ