ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತ ಸಮಿತಿ ವರದಿ ನೀಡುವ ತನಕ ಯುಪಿಎ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಸಿಪಿಎಂ ಶುಕ್ರವಾರ ಸ್ಪಷ್ಟಪಡಿಸಿದೆ. "ಪ್ರಸಕ್ತ ಜಾಥಾಗಳು ರಾಜಕೀಯ ಲಾಭ ಗಳಿಸುವ ಗುರಿ ಹೊಂದಿಲ್ಲ. ಪರಮಾಣು ಒಪ್ಪಂದದ ಬಗ್ಗೆ ಜನರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನೆಲ್ಲೂರಿನಲ್ಲಿ ತಿಳಿಸಿದರು.
ಬಹು ರಾಷ್ಟ್ರೀಯ ಜಂಟಿ ನೌಕಾಭ್ಯಾಸ ವಿರೋಧಿಸಿ ಬುಧವಾರ ಚೆನ್ನೈನಿಂದ ಜಾಥಾ ಆರಂಭಿಸಿದ ಕಾರಟ್ ಆಂಧ್ರಪ್ರದೇಶದ ನೆಲ್ಲೂರು, ಪ್ರಕಾಶಂ ಮತ್ತು ಗುಂಟೂರು ಜಿಲ್ಲೆಗಳನ್ನು ಮುಟ್ಟಿದ್ದಾರೆ. ಮಾರ್ಗಮಧ್ಯೆ ಹಲವಾರು ಸಭೆಗಳನ್ನು ಏರ್ಪಡಿಸಿದ್ದ ಅವರು ಅಮೆರಿಕದ ಒತ್ತಡಗಳಿಗೆ ಭಾರತ ಮಣಿಯುತ್ತಿದೆ ಮತ್ತು ನೌಕಾಭ್ಯಾಸಕ್ಕೂ ಅವಕಾಶ ನೀಡಿದೆ ಎಂದು ಆರೋಪಿಸಿದರು.
ಪರಮಾಣು ಒಪ್ಪಂದದ ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಕುರಿತು ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತಿತರರ ಅಭಿಪ್ರಾಯಗಳನ್ನು ಪಡೆಯಲು ದೆಹಲಿಯಲ್ಲಿ ಸೆ.10ರಂದು ಎಡಪಕ್ಷಗಳು ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳುವುದೆಂದು ಅವರು ತಿಳಿಸಿದರು.
ಭಾರತ ಹಿಂದಿನ ರಷ್ಯಾ ಮತ್ತಿತರ ರಾಷ್ಟ್ರಗಳ ಜತೆ ಅನೇಕ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದರೂ, ಹಿಂದೆ ಯಾವುದೇ ರಾಷ್ಟ್ರದ ಜತೆ ವ್ಯೂಹಾತ್ಮಕ ಮೈತ್ರಿ ಬೆಸೆಯುವ ಪ್ರಸ್ತಾವನೆ ಇರಲಿಲ್ಲ ಎಂದು ಕಾರಟ್ ಹೇಳಿದರು.
|