ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳು ತಮ್ಮ ಧೋರಣೆಯನ್ನು ಮೃದುಗೊಳಿಸಿವೆ ಎಂಬ ಮಾತನ್ನು ಸಿಪಿಎಂನ ಹಿರಿಯ ಧುರೀಣ ಜ್ಯೋತಿ ಬಸು ಅಸಂಬದ್ಧ ಎಂದು ತಳ್ಳಿಹಾಕಿದ್ದಾರೆ. ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷ ತನ್ನ ನಿಲುವನ್ನು ಮೃದುಗೊಳಿಸಿದೆಯೇ ಎಂದು ವರದಿಗಾರರ ಪ್ರಶ್ನೆಗೆ ಅನರು ಮೇಲಿನಂತೆ ಉತ್ತರಿಸಿದರು.
ಸೆ.28ರಂದು ಸಿಪಿಎಂ ಪಾಲಿಟ್‌ಬ್ಯೂರೋ ಸಭೆ ನಡೆಯಲಿದ್ದು, ಅದರ ಬೆನ್ನಿಗೇ ಪಕ್ಷದ ಕೇಂದ್ರ ಸಮಿತಿಯ ಮೂರು ದಿನಗಳ ಸಭೆ ಸೆ.29ರಿಂದ ನಡೆಯಲಿದೆ. ಆ ಸಂದರ್ಭದಲ್ಲಿ ಪರಮಾಣು ವಿಷಯವನ್ನು ಚರ್ಚಿಸಲಾಗುವುದು ಎಂದು ಬಸು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯುಪಿಎ-ಎಡಪಕ್ಷ ಸಮಿತಿಯ ಫಲಶ್ರುತಿಯ ಬಗ್ಗೆ ಹೇಳಲು ತನಗೆ ಸಾಧ್ಯವಿಲ್ಲ ಎಂದು ಹೇಳಿದರು. ಸಮಿತಿ ವರದಿ ನೀಡುವ ತನಕ ಒಪ್ಪಂದವನ್ನು ಅನುಷ್ಠಾನಕ್ಕೆ ತರಬಾರದೆಂದು ಎಡಪಕ್ಷಗಳು ಈಗಾಗಲೇ ಕಠಿಣ ಎಚ್ಚರಿಕೆ ನೀಡಿದೆ.
|