ಉದಯಪುರ-ರಾಜ್‌ಸಮುಂಡ್ ಜಿಲ್ಲೆಯ ದೆಸುರಿ ಕಿ ನಾಲ್ ಗ್ರಾಮದ ಬಳಿ ಟ್ರಕ್ಕೊಂದು ಆಳವಾದ ಕಂದಕಕ್ಕೆ ಬಿದ್ದು ಕನಿಷ್ಠ 72 ಯಾತ್ರಿಗಳು ಅಸುನೀಗಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕಡಿದಾದ ತಿರುವೊಂದರಲ್ಲಿ ಟ್ರಕ್ ಚಾಲಕನ ಹತೋಟಿ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ.
ವಾಹನವು ರಸ್ತೆಯ ಬದಿಯಲ್ಲಿದ್ದ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿಬಿತ್ತು ಎಂದು ರಾಜಸಮುಂಡ್ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. 80 ಅಡಿ ಆಳದ ಕಂದಕದಿಂದ 72 ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸಲ್ಮಾರ್ ಜಿಲ್ಲೆಯಲ್ಲಿರುವ ಹಿಂದು, ಮುಸ್ಲಿಮರು ಆರಾಧಿಸುವ ಸೂಫಿ ಸಂತ ರಾಮದೇವ ಮಂದಿರಕ್ಕೆ ಯಾತ್ರಿಗಳು ತೆರಳುತ್ತಿದ್ದಾಗ, ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ರಾತ್ರಿ 8 ಗಂಟೆಗೆ ಅಪಘಾತ ಸಂಭವಿಸಿತು ಎಂದು ಉದಯಪುರ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ರಾಜೀವ್ ದಾಸೋತ್ ತಿಳಿಸಿದ್ದಾರೆ.
ಶೋಧಕದೀಪದ ನೆರವಿನಿಂದ ದೇಹಗಳನ್ನು ತೆಗೆಯಲು, ಗಾಯಾಳುಗಳನ್ನು ರಕ್ಷಿಸಲು ಕ್ರೇನ್‌ಗಳನ್ನು ಬಳಸಲಾಯಿತು ಎಂದು ಎಸ್‌ಪಿ ರೂಪಿಂದರ್ ಸಿಂಗ್ ತಿಳಿಸಿದರು.ಕೆಲವು ದೇಹಗಳು ಚೂರುಚೂರಾಗಿದ್ದರಿಂದ ಅವುಗಳನ್ನು ಗುರುತಿಸುವುದು ತೀವ್ರ ಕಷ್ಟವಾಯಿತು.
ರಾಜಸಮುಂಡ್‌ನಿಂದ ಜೋಧಪುರಕ್ಕೆ ತೆರಳುತ್ತಿದ್ದ ಟ್ರಕ್‌ನಲ್ಲಿ ಸುಮಾರು 200 ಯಾತ್ರಾರ್ಥಿಗಳು ಇದ್ದರೆಂದು ಸಿಂಗ್ ಹೇಳಿದರು. ಏತನ್ಮಧ್ಯೆ, ರಾಜಸ್ಥಾನ ಸರ್ಕಾರ ಮೃತರ ಬಂಧುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆಂದು ಅಧಿಕೃತ ವಕ್ತಾರ ಜೈಪುರದಲ್ಲಿ ತಿಳಿಸಿದರು.
|