ಬಹರಾಂಪುರದ ಕಾಂಗ್ರೆಸ್ ಸಂಸತ್ ಸದಸ್ಯ ಅಧೀರ್ ಚೌಧರಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ಸ್ಥಳೀಯ ಕೋರ್ಟ್ ಶನಿವಾರ ವಿಧಿಸಿದೆ. ಸೆ.21ರವರೆಗೆ ಚೌಧರಿ ಅವರನ್ನು ಬಹರಾಂಪುರ ಜೈಲಿನಲ್ಲಿ ಇರಿಸಲಾಗುವುದು. ಅವರ ವಕೀಲರು ಉನ್ನತ ಕೋರ್ಟ್‌ನಲ್ಲಿ ಅಪೀಲು ಮಾಡುವರೆಂದು ನಿರೀಕ್ಷಿಸಲಾಗಿದೆ.
2003ರಲ್ಲಿ ಕಾಟ್ವಾದ ಸಿಪಿಎಂ ಗ್ರಾಮಪಂಚಾಯತ್ ಸದಸ್ಯನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 2005ರಲ್ಲಿ ಬಂಧಿಸಲಾಯಿತಾದರೂ ಸಾಕ್ಷ್ಯಾಧಾರದ ಕೊರತೆಯಿಂದ ಕೆಳಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು.
ಇಬ್ಬರ ಹತ್ಯೆ ಪ್ರಕರಣದಲ್ಲಿ ಜಾಮೀನು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಚೌಧರಿ ಅವರನ್ನು ಶುಕ್ರವಾರ ಬಂಧಿಸಲಾಯಿತು. ಏತನ್ಮಧ್ಯೆ, ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದು ತಮ್ಮ ಮುಖಂಡನ ಬಂಧನ ವಿರುದ್ಧ ಪ್ರದರ್ಶನ ನಡೆಸಿದರು.
|