ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು ಬಿದ್ದು ಕನಿಷ್ಠ 15 ಮಂದಿ ಮೃತಪಟ್ಟು, ಇನ್ನೂ 10 ಜನರಿಗೆ ಗಾಯಗಳಾಗದ ಘಟನೆ ನಗರದ ಜನದಟ್ಟಣೆಯ ಪುಂಜಗುಟ್ಟಾ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದ್ದು, ನಿಮ್ಸ್ ಮತ್ತು ಅಪೋಲೊ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆಯಲ್ಲಿ ಕೆಲವು ಆಟೋರಿಕ್ಷಾ ಮತ್ತು ಕಾರುಗಳು ನಜ್ಜುಗುಜ್ಜಾಗಿವೆ.
ಬೇಗಂಪೇಟೆ ಪ್ರದೇಶದಿಂದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ಅಧಿಕೃತ ಶಿಬಿರ ಕಚೇರಿ ಸಮೀಪ ಮೇಲ್ಸೇತುವೆ ಹಾದುಹೋಗುತ್ತದೆ. ಅಪಘಾತದ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ವಾಹಸನಂಚಾರ ಸ್ಥಗಿತಗೊಂಡಿದೆ ಮತ್ತು ಟ್ರಾಫಿಕ್‌ನಲ್ಲಿ ಆಂಬುಲೆನ್ಸ್‌ಗಳು ಸಿಕ್ಕಿಬಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ವಿಳಂಬವಾಯಿತು.
ಟ್ರಾಫಿಕ್ ಜಾಮ್‌ನಿಂದ ಅವಶೇಷದ ಸ್ಥಳಕ್ಕೆ ಕ್ರೇನ್ ತಲುಪಲು ವಿಳಂಬವಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಸಿಮೆಂಟ್‌ನಲ್ಲಿ ಎರಕಹೊಯ್ದ ಅಚ್ಚುಗಳ ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನದಿಂದ ನಿರ್ಮಿಸಿದ್ದ ಮೇಲ್ಸೇತುವೆಯನ್ನು ಈ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟಿಸಬೇಕಿತ್ತು.
ಪ್ರತಿಪಕ್ಷದ ಮುಖಂಡ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ದುರಂತದ ಸ್ಥಳಕ್ಕೆ ಭೇಟಿ ನೀಡಿದ್ದು, ಫ್ಲೈಓವರ್ ಗುಣಮಟ್ಟ ಕಾಯ್ದುಕೊಳ್ಳದಿರುವುದಕ್ಕೆ ಸರ್ಕಾರವನ್ನು ಟೀಕಿಸಿದರು.
|