ಕಲಾಪಕ್ಕೆ ಸತತ ಅಡ್ಡಿಪಡಿಸುವ ಮೂಲಕ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆಗೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷ ಬಿಜೆಪಿಯನ್ನು ಸಿಪಿಎಂ ಸೋಮವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಪರಮಾಣು ಒಪ್ಪಂದದ ಬಗ್ಗೆ ಚರ್ಚೆಗೆ ಅವಕಾಶ ನೀಡದಿರುವ ಪ್ರತಿಪಕ್ಷದ ತಂತ್ರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಉಭಯ ಸದನಗಳ ವ್ಯವಹಾರ ಸಲಹಾ ಸಮಿತಿಗಳು ರಚನಾತ್ಮಕ ಚರ್ಚೆ ನಡೆಸಬೇಕೆಂಬ ಬೇಡಿಕೆಗೆ ಒಪ್ಪಿಗೆ ಸೂಚಿಸಿವೆ.
ದಿನಾಂಕವನ್ನು ಅಂತಿಸಗೊಳಿಸಲಾಗಿದ್ದು, ಚರ್ಚೆಗೆ ಉತ್ತರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಬಿಜೆಪಿಯ ಹಠವಾದಿ ನಿಲುವಿನಿಂದ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗುತ್ತಿದೆ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಂ ಯೆಚೂರಿ ವರದಿಗಾರರಿಗೆ ತಿಳಿಸಿದರು.
ಒಪ್ಪಂದವನ್ನು ವಿರೋಧಿಸುವ ಖಡಾಖಂಡಿತ ನಿಲುವನ್ನು ಕೈಗೊಳ್ಳಲು ಬಿಜೆಪಿಗೆ ಇಷ್ಟವಿಲ್ಲ ಎನ್ನುವುದು ನಮಗೆ ಪೂರ್ಣ ಮನದಟ್ಟಾಗಿದೆ. ಬಿಜೆಪಿಯ ಹಿಂದಿನ ಮತ್ತು ಪ್ರಸಕ್ತ ಅಧ್ಯಕ್ಷರ ಹೇಳಿಕೆ ಕೂಡ ಈ ವಿಷಯದ ಬಗ್ಗೆ ವೈರುಧ್ಯವನ್ನು ತೋರಿಸುತ್ತದೆ ಎಂದು ಸಿಪಿಎಂ ನಾಯಕರು ತಿಳಿಸಿದರು.
|