ಅಮೆರಿಕದ ಜತೆ ಪರಮಾಣು ಒಪ್ಪಂದದ ಭಿನ್ನಾಭಿಪ್ರಾಯ ಪರಿಹಾರಕ್ಕೆ ಯುಪಿಎ-ಎಡಪಕ್ಷಗಳ ಪ್ರಥಮ ಸಭೆಗೆ ಮುನ್ನ, ಎಡಪಕ್ಷಗಳು ಸೋಮವಾರ ತಮ್ಮ ನಿಲುವನ್ನು ಬಿಗಿಗೊಳಿಸಿದೆ. ಹೈಡ್ ಕಾಯ್ದೆ ದ್ವಿಪಕ್ಷೀಯ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಮಗೆ ಮನದಟ್ಟು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತ ಪರಮಾಣು ಪುನರುಜ್ಜೀವನದ ಬಸ್ ತಪ್ಪಿಸಿಕೊಳ್ಳಬಾರದೆಂದು ಪ್ರಧಾನಿ ಮನಮೋಹನ ಸಿಂಗ್ ಸಲಹೆಯನ್ನು ಎಡಡಪಕ್ಷಗಳು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿವೆ. ಅಮೆರಿಕದ ದೃತರಾಷ್ಟ್ರ ಆಲಿಂಗನದ ಸಲುವಾಗಿ ತೆರಳುವುದು ಬಸ್ ಪ್ರಯಾಣದ ಗುರಿ ಎಂದು ಅವರು ಹೇಳಿದರು.
ಯುಪಿಎ ಮತ್ತುಎಡಪಕ್ಷಗಳ ನಡುವೆ ಸಮಿತಿ ರಚಿತವಾಗಿರುವುದು ಹೌದು. ನಾವು ನಮ್ಮ ದೃಷ್ಟಿಕೋನವನ್ನು ಮಂಡಿಸುತ್ತೇವೆ. ನಮ್ಮ ಆಕ್ಷೇಪಗಳನ್ನು ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ.
ನಮ್ಮ ಆಕ್ಷೇಪಗಳು ಮಾತ್ರವಲ್ಲ. ವಿದೇಶಾಂಗ ನೀತಿ, ವ್ಯೂಹಾತ್ಮಕ ಸ್ವಾಯತ್ತೆ ಮತ್ತು ಇಂಧನ ಭದ್ರತೆ ಬಗ್ಗೆ ಆತಂಕಿತರಾಗಿರುವ ವಿಜ್ಞಾನಿಗಳಿಂದ ಹಿಡಿದು ಸಾರ್ವಜನಿಕರ ವ್ಯಾಪಕ ಆಕ್ಷೇಪಗಳನ್ನು ಅವರಿಗೆ ಮನದಟ್ಟು ಮಾಡುತ್ತೇವೆ ಎಂದು ಪ್ರಕಾಶ್ ಕಾರಟ್ ತಿಳಿಸಿದರು.
ಎಲ್ಲ ವಿಷಯಗಳನ್ನು ನಾವು ಚರ್ಚಿಸುತ್ತೇವೆ. ಆದರೆ ಯಾರು ಕೂಡ ದ್ವಿಪಕ್ಷೀಯ ಒಪ್ಪಂದದ ಮೇಲೆ ಹೈಡ್ ಕಾಯ್ದೆಯ ಪಾತ್ರ ಅಥವಾ ಪರಿಣಾಮ ಇಲ್ಲವೆಂದು ನಮಗೆ ಮನದಟ್ಟು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
|