ಯುಪಿಎ ಸರ್ಕಾರ ರೈತರಿಗೆ ಜೀವನಭದ್ರತೆ ಮತ್ತು ಆಹಾರಭದ್ರತೆ ಖಾತರಿಗೆ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಬುಧವಾರ ರೈತರಿಗೆ ಭರವಸೆ ನೀಡಿದರು.
ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದ ರೈತರ ಆಂದೋಳನದ ಸಮನ್ವಯ ಸಮಿತಿ ಮತ್ತು ಭಾರತೀಯ ಕಿಸಾನ್ ಸಂಘದ ನಿಯೋಗದ ಜತೆ ಪ್ರಧಾನಿ ಮಾತನಾಡುತ್ತಿದ್ದರು.
ಅವರ ಮನವಿಪತ್ರ ಸ್ವೀಕರಿಸಿ ಮಾತನಾಡುತ್ತಾ, ರೈತರ ಪ್ರಗತಿಗೆ ಯುಪಿಎ ಸರ್ಕಾರ ಅತ್ಯುಚ್ಚ ಆದ್ಯತೆ ನೀಡುತ್ತದೆಂದು ಪ್ರಧಾನಿ ತಿಳಿಸಿದರೆಂದು ಪ್ರಧಾನಮಂತ್ರಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಯುಪಿಎ ಸರ್ಕಾರ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಿ ಕನಿಷ್ಠ ಬೆಂಬಲ ದರವನ್ನು ಹೆಚ್ಚಿಸಿದೆ. ಹಿಂದಿನ ಎನ್‌ಡಿಎ ಸರ್ಕಾರದಿಂದ ರೈತರ ಕಡೆಗಣಿಕೆ ಮತ್ತು ಕನಿಷ್ಠ ಬೆಂಬಲ ಬೆಲೆಯಲ್ಲಿ ಕನಿಷ್ಠ ಏರಿಕೆಗೆ ಇದು ತದ್ವಿರುದ್ಧವಾಗಿದೆ ಎಂದು ಡಾ. ಸಿಂಗ್ ಹೇಳಿದ್ದಾರೆ.
ರೈತರ ಬೆಳೆಹಾನಿ ವಿರುದ್ಧ ವಿಮಾಸೌಲಭ್ಯ ಒದಗಿಸುವ ಪ್ರಸ್ತಾಪಕ್ಕೆ ಯುಪಿಎ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ. ಕೃಷಿ ಸಂಶೋಧನೆಯಲ್ಲಿ ಬಂಡವಾಳ ಹೆಚ್ಚಿಸುವ ಸರ್ಕಾರದ ಬದ್ಧತೆಯ ಬಗ್ಗೆ ಪ್ರಧಾನಿ ಭರವಸೆ ನೀಡಿದ್ದಾರೆ.
|