ಭಗವಾನ್ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಪ್ರಧಾನಿ ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಗುರುವಾರ ಆಗ್ರಹಿಸಿದೆ.
ಬಿಜೆಪಿ ಪದಾಧಿಕಾರಿಗಳು ಮತ್ತು ಪಕ್ಷದ ಹಿರಿಯ ನಾಯಕರ ತುರ್ತು ಸಭೆಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಈ ಬೇಡಿಕೆ ಮುಂದಿಟ್ಟಿದ್ದಾರೆ."ಕೇಂದ್ರ ಕಾನೂನು ಸಚಿವ ಹನ್ಸ್ ರಾಜ್ ಭಾರದ್ವಜ್ ಪೂರಕ ಪ್ರಮಾಣಪತ್ರ ಸಲ್ಲಿಸುವ ಬಗ್ಗೆ ಹೇಳಿದ್ದರೂ ಅದು ತೃಪ್ತಿಕರವಲ್ಲ.
ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಪ್ರಮಾಣಪತ್ರವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಮತ್ತು ತನಿಖಾ ಸಮಿತಿಯೊಂದನ್ನು ನೇಮಿಸಬೇಕು" ಎಂದು ಅವರು ಹೇಳಿದರು.
ರಾಮಮಂದಿರ ನಿರ್ಮಾಣ ವಿರೋಧಿಸಿದವರು ಕೂಡ ರಾಮಜನ್ಮಭೂಮಿಯಲ್ಲಿ ರಾಮ ಹುಟ್ಟಿದ್ದಾನೆಂದು ಹೇಗೆ ಸಾಬೀತು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರೇ ಹೊರತು ರಾಮನ ಅಸ್ತಿತ್ವವನ್ನು ಯಾರೂ ಪ್ರಶ್ನಿಸಿರಲಿಲ್ಲ ಎಂದು ಆಡ್ವಾಣಿ ಹೇಳಿದರು.
ಇದು ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷೆಯನ್ನು ಒಳಗೊಂಡ ನಿರ್ಧಾರ. ಇದಕ್ಕಾಗಿ ಅವರು ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
|