ರಾಮನೂ ಇಲ್ಲ,ರಾಮಾಯಣವೂ ಇಲ್ಲ. ಎಲ್ಲವೂ ಕಲ್ಪನೆ ಮಾತ್ರ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರ ಪ್ರಮಾಣ ಪತ್ರ ನೀಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಧಕ್ಕೆ ಉಂಟು ಮಾಡಿದ್ದು, ಹಿಂದುಗಳ ಕ್ಷಮೆ ಕೋರಬೇಕು ಎಂದು ಭಾರತೀಯ ಜನತಾ ಪಕ್ಷ ಒತ್ತಾಯಿಸಿದೆ.
ಹಿಂದುಗಳ ಭಾವನೆಗಳ ಮೇಲೆ ಸವಾರಿ ಮಾಡುವ ಕಾಂಗ್ರೆಸ್ ಅನ್ಯ ಮತಗಳ ಬಗ್ಗೆಯೂ ಸರಕಾರ ಇದೇ ತೆರನಾದ ಹೇಳಿಕೆ ನೀಡಲು ಸಿದ್ಧವಿದೆಯೇ ಎಂದು ಸವಾಲೆಸೆದಿದೆ. ರಾಮ ಮತ್ತು ರಾಮಾಯಣದ ಇತರ ಪಾತ್ರಗಳು ಅಸ್ತಿತ್ವದಲ್ಲಿದ್ದುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ನೇತೃತ್ವದ ಸರಕಾರ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ.
ಸರಕಾರದ ಈ ಕ್ರಮ ಧರ್ಮ ನಿಂದನೆ ಮತ್ತು ಉದ್ಧಟತನದ ಪರಮಾವಧಿಯಾಗಿದೆ. ಈ ಹೇಳಿಕೆಯ ಮೂಲಕ ಸರಕಾರ ದೇಶದಲ್ಲಿನ ಮತ್ತು ವಿದೇಶಗಳಲ್ಲಿನ ಹಿಂದುಗಳನ್ನು ಅವಮಾನಿಸಿದೆ.ಈ ತಪ್ಪಿಗಾಗಿ ಪ್ರಧಾನಿ ಮತ್ತು ಸೋನಿಯಾ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ,ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
|