ವಿವಾದಿತ ಸೇತುಸಮುದ್ರಂ ಯೋಜನೆಯ ಬಗ್ಗೆ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ ಪೂರಕ ಪ್ರಮಾಣಪತ್ರ ಸಲ್ಲಿಸಲಿದೆ. ನಮ್ಮ ಧರ್ಮಗ್ರಂಥಗಳಲ್ಲಿರುವ ಪಾತ್ರಗಳು ಅಸ್ತಿತ್ವದಲ್ಲಿದ್ದವೆಂಬ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿರುವುದಕ್ಕೆ ಸಂಬಂಧಿಸಿದಂತೆ ಪೂರಕ ಪ್ರಮಾಣ ಪತ್ರವನ್ನು ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಎಚ್.ಭಾರದ್ವಾಜ್ ತಿಳಿಸಿದರು.
ರಾಮಾಯಣದ ಭಗವಾನ್ ರಾಮ ಮತ್ತಿತರ ಪಾತ್ರಗಳ ಅಸ್ತಿತ್ವ ಸ್ಥಿರಪಡಿಸುವ ಐತಿಹಾಸಿಕ ಸಾಕ್ಷ್ಯಾಧಾರವಿಲ್ಲ ಎಂದು ಪುರಾತತ್ವ ಸರ್ವೇಕ್ಷಣೆ ಇಲಾಖೆ ತಿಳಿಸಿದ ಕೆಲವು ದಿನಗಳಲ್ಲಿ ಈ ಪ್ರಕಟಣೆ ಹೊರಬಿದ್ದಿದೆ.
ಈ ಪ್ರಮಾಣಪತ್ರವು ಅಸಂಬದ್ಧ ಎಂದು ಸಂಘಪರಿವಾರ ಸೇರಿದಂತೆ ಬಿಜೆಪಿ ವಾಗ್ದಾಳಿ ಮಾಡಿತ್ತು. ಬಿಜೆಪಿಯ ಹಿರಿಯ ನಾಯಕ ಆಡ್ವಾಣಿ ಭೋಜನಕೂಟದ ಸಭೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಮತ್ತು ಕಾನೂನು ಸಚಿವರನ್ನು ಭೇಟಿ ಮಾಡಿ ಅತ್ಯಂತ ಆಕ್ಷೇಪಾರ್ಹ ಪ್ರಮಾಣಪತ್ರವನ್ನು ವಾಪಸು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.
ಏತನ್ಮಧ್ಯೆ , ಪುರಾತತ್ವ ಇಲಾಖೆಯ ಉನ್ನತಾಧಿಕಾರಿಗಳು ಕಾನೂನು ಸಚಿವಾಲಯದ ಜತೆ ಗುರುವಾರ ಮಾತುಕತೆ ನಡೆಸಿದರು.
|