ನವದೆಹಲಿ-ಭಾರತ-ಚೀನ ದ್ವಿಪಕ್ಷೀಯ ಸಂಬಂಧದ ಸುಧಾರಣೆ ಸಲುವಾಗಿ ವಿದೇಶಾಂಗ ಸಚಿವ ಶಿವಶಂಕರ ಮೆನನ್ ಸೋಮವಾರ ಬೀಜಿಂಗ್‌ಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಚೀನದ ಅಧಿಕಾರಿಗಳ ಜತೆ ಪರಸ್ಪರ ಹಿತಾಸಕ್ತಿಯ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಇದಲ್ಲದೆ, ಭಾರತ-ಅಮೆರಿಕ ಪರಮಾಣು ಸಹಕಾರ ಒಪ್ಪಂದ ಮತ್ತು ಈ ವರ್ಷಾಂತ್ಯದಲ್ಲಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಚೀನಕ್ಕೆ ಭೇಟಿ ನೀಡುವ ಯೋಜನೆ ಕೂಡ ಮಾತುಕತೆಯ ವೇಳೆ ಪ್ರಸ್ತಾಪವಾಗಲಿದೆ.ಇತ್ತೀಚೆಗೆ, ಪರಮಾಣು ಸರಬರಾಜು ರಾಷ್ಟ್ರಗಳ ಗುಂಪಿನಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಪ್ರಸ್ತಾಪಿಸುವ ಇಚ್ಛೆಯನ್ನು ಚೀನ ವ್ಯಕ್ತಪಡಿಸಿತ್ತು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಮತ್ತು ಚೀನದ ಉಪ ಸಚಿನ ದಾಯಿ ಬಿಂಗೊ ನಡುವೆ ಗಡಿ ಕುರಿತು ಮುಂದಿನ ಸುತ್ತಿನ ಮಾತುಕತೆ ಈ ತಿಂಗಳಾಂತ್ಯದಲ್ಲಿ ನಡೆಯುವುದೆಂದು ನಿರೀಕ್ಷಿಸಲಾಗಿದೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಿನ ತಿಂಗಳು ಚೀನಕ್ಕೆ ಭೇಟಿ ನೀಡುವರೆಂದು ನಿರೀಕ್ಷಿಸಲಾಗಿದೆ.ಪ್ರಸಕ್ತ ಮೆನನ್ ನೇಪಾಳದ ರಾಜಕೀಯ ಪರಿಸ್ಥಿತಿ ಪರಿಶೀಲನೆ ಸಲುವಾಗಿ ಅಲ್ಲಿಗೆ ಭೇಟಿ ನೀಡಿದ್ದಾರೆ.
|