ರಾಷ್ಟ್ರದ ಶಾಲೆಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಂದರ್ಭದಲ್ಲಿ ಅವರ ಜಾತಿಯ ಸ್ಥಾನಮಾನದ ಬಗ್ಗೆ ಬಹಿರಂಗಪಡಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.
ಇಂತಹ ಯಾವುದೇ ಮಾಹಿತಿಯು ಐಚ್ಛಿಕವಾಗಿರಬೇಕು.ಅಂದರೆ ತನ್ನ ಜಾತಿಯ ಗುರುತನ್ನು ಬಹಿರಂಗಪಡಿಸುವುದು ವಿದ್ಯಾರ್ಥಿಯ ವಿವೇಚನೆಗೆ ಬಿಟ್ಟ ವಿಚಾರ ಎಂದು ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. . ಶಾಲೆಗಳು ಪ್ರವೇಶದ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಜಾತಿ ಬಹಿರಂಗ ಅರ್ಜಿಗಳಿಗೆ ಸಂಪೂರ್ಣ ನಿಷೇಧ ವಿಧಿಸಬೇಕೆಂದು 81 ವರ್ಷದ ಇಳಿವಯಸ್ಸಿನ ಸ್ವಾತಂತ್ರ್ಯ ಯೋಧ ಸಲೇಂವೇಲು ಗಾಂಧಿ ಅಲಿಯಾಸ್ ವೇಲು ಸಲ್ಲಿಸಿದ್ದ ಪಿಐಎಲ್‌ನ್ನು ಪೀಠ ವಜಾ ಮಾಡಿತು.
ಅರ್ಜಿದಾರರ ಪ್ರಶಂಸನೀಯ ಉದ್ದೇಶಕ್ಕೆ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದರೂ, ಈ ಬಗ್ಗೆ ಯಾವುದೇ ಆದೇಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿತು. ಉಚಿತ ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯ ಪಡೆಯುವ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಅದು ತಿಳಿಸಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಜಾತಿಗೆ ಉನ್ನತ ಶಿಕ್ಷಣ ಪಡೆಯಲು ಅಥವಾ ಉದ್ಯೋಗ ಗಳಿಸಲು ಶಾಲೆಯ ಪ್ರಮಾಣ ಪತ್ರಗಳು ಆಧಾರವಾಗಿದೆ. ಇಲ್ಲದಿದ್ದರೆ ಈ ಫಲಾನುಭವಿಗಳು ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ ಎಂದು ಅವರು ಹೇಳಿದರು.
|