ನಂದಿಗ್ರಾಮದಲ್ಲಿ ಮಾರ್ಚ್ 14ರಂದು ಗ್ರಾಮಸ್ಥರ ಮೇಲೆ ಪೊಲೀಸರಿಂದ ಗೋಲಿಬಾರ್ ನಡೆದ ಸಂದರ್ಭದಲ್ಲಿ 348 ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ರೀತಿಯ ದೌರ್ಜನ್ಯಗಳನ್ನು ನಡೆಸಲಾಯಿತು ಎಂದು ಸರ್ಕಾರೇತರ ಸಂಸ್ಥೆಯೊಂದರ ಸ್ವತಂತ್ರ ವೇದಿಕೆಯೊಂದು ದೂರಿದೆ.
247 ಮಹಿಳೆರಿಗೆ ದೈಹಿಕ ಹಿಂಸೆ, 46 ಮಹಿಳೆಯರ ಶೀಲಹರಣ ಮತ್ತು 17 ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ 11 ಮಂದಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಭೂಸುಧಾರಣೆಗಳ ಮಾಜಿ ಕಾರ್ಯದರ್ಶಿ ದೇವವ್ರತ ಬಂಡೋಪಾಧ್ಯಾಯ ತಿಳಿಸಿದರು.
ಎನ್‌ಜಿಒಗಳ ಮುಕ್ತ ವೇದಿಕೆ ಸಮೀಕ್ಷಾ ಸಮನ್ನಯ್ ನಡೆಸಿದ ನಂದಿಗ್ರಾಮದ ಘಟನೆಯ ಸಮೀಕ್ಷಾ ವರದಿ ಬಿಡುಗಡೆ ಮಾಡುತ್ತಾ ಅವರು ಈ ವಿಷಯ ತಿಳಿಸಿದರು.ನಂದಿಗ್ರಾಮದಲ್ಲಿ ಕನಿಷ್ಠ ಐದು ಪೋಲೀಸೇತರ ಸಹಚರರಿದ್ದು, ಅವರು ಸಹ ಗ್ರಾಮಸ್ಥರ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ನಂದಿಗ್ರಾಮದ ಘಟನೆಯ ದಾಖಲೆಗಳು ಹಿಂಸಾಚಾರ ಪ್ರಮಾಣ ಮತ್ತು ಮಹಿಳೆಯರ ಮೇಲೆ ಸಂಘಟಿತ ದೌರ್ಜನ್ಯದ ಬಗ್ಗೆ ನಿಜವಾದ ಚಿತ್ರಣ ನೀಡಲು ವಿಫಲವಾಗಿದೆ ಎಂದು ಹೇಳಿದ ಅವರು, ಹೊಸ ಸಮೀಕ್ಷೆಯು ಸತ್ತವರು,ಗಾಯಗೊಂಡವರು ಮತ್ತು ನಾಪತ್ತೆಯಾದವರ ಸಂಖ್ಯೆ, ಮಹಿಳಾ ಸಂತ್ರಸ್ಥರು ಮತ್ತು ಅವರ ಮೇಲೆ ಹಿಂಸಾಚಾರದ ಸ್ವರೂಪವನ್ನು ಪತ್ತೆಹಚ್ಚಲಿದೆ ಎಂದು ಅವರು ತಿಳಿಸಿದರು.
ನಂದಿಗ್ರಾಮದಲ್ಲಿ 47 ತನಿಖೆದಾರರು ಏಪ್ರಿಲ್, ಮೇನಲ್ಲಿ 2,763 ಮನೆಗಳ ಸಮೀಕ್ಷೆ ನಡೆಸಿದರು. ಉಳಿದ 4,095 ಮನೆಗಳ ಸಮೀಕ್ಷೆಯನ್ನು ಬಳಿಕ ಕೈಗೆತ್ತಿಕೊಳ್ಳಲಾಗುವುದು.
|