ಕುಲಾಂತರಿ ತಳಿ ಬದನೆಕಾಯಿಗಳ ಕ್ಷೇತ್ರ ಪರೀಕ್ಷೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಮಂದಿ ಗ್ರೀನ್‌ಪೀಸ್ ಕಾರ್ಯಕರ್ತರು ಮಂಗಳವಾರ ಪ್ರದರ್ಶನ ನಡೆಸಿದರು.
ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ಭಾರತೀಯ ಕೃಷಿ ಸಂಶೋಧನೆ ಮಂಡಳಿಯು(ಐಸಿಎಆರ್) ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆ ಮಾನ್ಸಾಂಟೊ ಮಹಿಕೊ ಜತೆ ಸೇರಿಕೊಂಡು ಅಸುರಕ್ಷಿತ ಕುಲಾಂತರಿ ಬದನೆಯನ್ನು ಜನರಿಗೆ ಬಲವಂತವಾಗಿ ತಿನ್ನಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಲ್ಲಿನ ತೋಟಗಳಲ್ಲಿ ಕುಲಾಂತರಿ ಬದನೆಯನ್ನು ಬೆಳೆಯಬಾರದೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಇದು ವಿರುದ್ಧವಾಗಿದೆ ಎಂದು ಗ್ರೀನ್‌ಪೀಸ್ ಕಾರ್ಯಕರ್ತ ಜೈ ಕೃಷ್ಣ ತಿಳಿಸಿದರು.
ನಾವು ಐಸಿಎಆರ್‌ಗೆ ಈ ಕುರಿತು ಪತ್ರ ಬರೆದಿದ್ದೇವೆ. ಆದರೆ ಪರಿಸರ ಕಾವಲು ಸಮಿತಿಗೆ ಇನ್ನೂ ಉತ್ತರ ಬಂದಿಲ್ಲ ಎಂದು ಕೃಷ್ಣ ತಿಳಿಸಿದರು.ಮಾನ್ಸಾಂಟೊ- ಮಹಿಕೊ ಅಮೆರಿಕದ ಬಹುರಾಷ್ಟ್ರೀಯ ಕೃಷಿ ಉತ್ಪನ್ನ ಸಂಸ್ಥೆಯಾಗಿದ್ದು, ಅದು ಕುಲಾಂತರಿ ಹತ್ತಿಯನ್ನು ಭಾರತದಲ್ಲಿ ಪರಿಚಯಿಸಿದ ಬಳಿಕ ಈಗ ಕುಲಾಂತರಿ ಬದನೆ ಬೀಜಗಳಿಗೆ ಜೆನೆಟಿಕ್ ಎಂಜಿನಿಯರಿಂಗ್ ಅನುಮೋದನೆ ಸಮಿತಿಯು ವಾಣಿಜ್ಯ ಅನುಮೋದನೆ ನೀಡಿದೆ.
ಕೀಟನಾಶಕ ಹರಳು ಪ್ರೋಟೀನ್‌ನ ವಂಶವಾಹಿ ಸಂಕೇತವನ್ನು ಸಸಿಗೆ ಅಳವಡಿಸುವ ಮೂಲಕ ಸತತ ಪ್ರೋಟೀನ್ ಉತ್ಪಾದಿಸಿ ಕೀಟಗಳಿಂದ ಬೆಳೆ ರಕ್ಷಣೆ ಮಾಡುವುದು ಕುಲಾಂತರಿ ತಳಿಯ ತಂತ್ರವಾಗಿದೆ.
ಆದಾಗ್ಯೂ, ಭಾರತದ ಕೃಷಿಕರು ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ಕುಲಾಂತರಿ ತಳಿಯ ಬೀಜಗಳನ್ನು ಬಿತ್ತಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ತಳಿಗಳನ್ನು ಬೆಳೆಸುವ ಮುಂಚೆ ಮಾನವನಿಗೆ ಮತ್ತು ಪರಿಸರಕ್ಕೆ ಅದರಿಂದ ಹಾನಿ ತಟ್ಟದಿರುವ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಬೇಕೆಂದು ಅವು ಆಗ್ರಹಿಸುತ್ತಿವೆ. ಭಾರತವು 2002ರಿಂದ ಕುಲಾಂತರಿ ಹತ್ತಿ ತಳಿಯ ವಾಣಿಜ್ಯ ಬೆಳೆಗೆ ಅವಕಾಶ ನೀಡಿದೆ.
|