ಭಾರತ-ಅಮೆರಿಕ ಪರಮಾಣು ಸಹಕಾರ ಒಪ್ಪಂದದ ಬಗ್ಗೆ ಸರ್ಕಾರ ಮುಂದುವರೆದರೆ ಎಡಪಕ್ಷಗಳ ಕೂಟ ಬೆಂಬಲ ಹಿಂತೆಗೆದುಕೊಳ್ಳುವುದು ಎಂದು ಯುಪಿಎ ಸರ್ಕಾರಕ್ಕೆ ಸಿಪಿಎಂ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. 6 ತಿಂಗಳವರೆಗೆ ಒಪ್ಪಂದವನ್ನು ಅನುಷ್ಠಾನಕ್ಕೆ ತರಬಾರದೆಂದು ಅದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಒಪ್ಪಂದದ ಬಗ್ಗೆ ಸರ್ಕಾರ ಮುಂದಡಿ ಇಡಬಾರದು ಎಂದು ಹೇಳಿದ್ದಾರೆ. ಇಡೀ ರಾಷ್ಟ್ರದಲ್ಲಿ ಒಪ್ಪಂದದ ಬಗ್ಗೆ ವಿರೋಧದ ಅಲೆಗಳು ಎದ್ದಿರುವಾಗ, ಪ್ರಜಾತಂತ್ರದಲ್ಲಿ ಸರ್ಕಾರ ಸಂಸತ್ತಿನ ಮಾತಿಗೆ ಬೆಲೆ ಕೊಡಬೇಕು ಎಂದು ಹೇಳಿದರು.
ಕನಿಷ್ಟ 6 ತಿಂಗಳು ಸರ್ಕಾರ ಒಪ್ಪಂದವನ್ನು ತಡೆಹಿಡಿಯದಿದ್ದರೆ ರಾಷ್ಟ್ರ ರಾಜಕೀಯ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.ವಿಜ್ಞಾನಿಗಳು, ಬುದ್ಧಿಜೀವಿಗಳು ಸೇರಿದಂತೆ ವಿವಿಧ ವರ್ಗದ ಜನರು ತಮ್ಮ ಕಳಕಳಿಗೆ ದನಿ ನೀಡಬೇಕು. ಆಗ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಅವರು ಹೇಳಿದರು. ಅಣು ಶಕ್ತಿ ಅನಿವಾರ್ಯ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಹೇಳಿಕೆಗೆ ಕಾರಟ್ ಹೇಳಿಕೆ ತದ್ವಿರುದ್ಧವಾಗಿದೆ.
|