ಮುಖ್ಯನ್ಯಾಯಾಧೀಶ ವೈ ಕೆ ಸಬರವಾಲ್ ವಿರುದ್ಧ ಲೇಖನ ಬರೆದಿದ್ದ ಮುಂಬೈ ಮೂಲದ ನಾಲ್ವರು ಪತ್ರಕರ್ತರು ತಪ್ಪಿತಸ್ಥರು ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದ್ದು, ಈ ಹಿನ್ನಲೆಯಲ್ಲಿ ನ್ಯಾಯಾಲಯ ನಿಂದನೆ ಪ್ರಕರಣದ ತಪ್ಪಿತಸ್ಥ ಆರೋಪಿಗಳು ವ್ಯಾಜ್ಯವನ್ನು ಸುಪ್ರೀಮ್ ಕೋರ್ಟ್‌ಗೆ ಕೊಂಡೊಯ್ದಿದ್ದಾರೆ.
ಮುಂಬೈ ಮೂಲದ ಮಿಡ್ ಡೆ ಪತ್ರಿಕೆ ಸಂಪಾದಕ ಎಂ. ಕೆ. ತಾಯಲ್, ಪ್ರಕಾಶಕ ಎಸ್, ಕೆ, ಅಖ್ತರ್, ಸ್ಥಾನಿಕ ಸಂಪಾದಕ ವಿತುಶಾ ಓಬೆರಾಯ್ ಮತ್ತು ವ್ಯಂಗಚಿತ್ರಕಾರ ಇರ್ಫಾನ್ ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು, ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ತೀರ್ಪಿನ ವಿರುದ್ಧ ಮನವಿ ಸಲ್ಲಿಸಿರುವ ಆಪಾದಿತರು, ಉಚ್ಚ ನ್ಯಾಯಾಲಯ ವಿನಾಕಾರಣ ಶಿಕ್ಷೆ ವಿಧಿಸುತ್ತಿದ್ದು, ಸಮರ್ಥನಿಯವಲ್ಲ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಪ್ರಕಟಗೊಂಡಿರುವ ಲೇಖನ ದಾಖಲೆ ಸ್ವರೂಪದ ಸಾಕ್ಷಿ ಹೊಂದಿದೆ ಎಂದು ವಾದಿಸಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶ ವೈ ಕೆ ಸಬರವಾಲ್ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧ ಪಟ್ಟಂತೆ ನ್ಯಾಯಾಂಗೀಯ ವಿಚಾರಣೆ ಆಗಬೇಕು ಎಂದು ಮಾಜಿ ಮುಖ್ಯ ನ್ಯಾಯಾಧೀಶರು ನೀಡಿರುವ ಪತ್ರಿಕಾ ಹೇಳಿಕೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಗೆ ಪತ್ರಕರ್ತರು ಲಗತ್ತಿಸಿದ್ದಾರೆ.
ಮೇ 18ರಂದು ಮಿಡ್ ಡೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ನ್ಯಾಯಮೂರ್ತಿ ಸಬರವಾಲ್ ಅವರು ತಮ್ಮ ಮಗನ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತೀರ್ಪು ನೀಡಿದ್ದಾರೆ ಎಂದು ಪ್ರಕಟಿಸಿತ್ತು.
|